– ಮಂಜುನಾಥ್ ದಂಡಿನಶಿವರ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ..
ಅದೇಕೋ ಏನೋ ಪ್ರತಿ ವರ್ಷ ಯುಗಾದಿ ಹಬ್ಬ ಬಂತೆಂದರೆ ಸಾಕು ನನಗೆ ನನ್ನ ಬಾಲ್ಯದ ದಿನಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಆ ಕಾಲದಲ್ಲಿ ಅಮ್ಮ ಮಾಡುತ್ತಿದ್ದ ಯುಗಾದಿ ಹಬ್ಬದ ನೆನಪಾಗುತ್ತದೆ. ನಮ್ಮದು ಬಯಲುಸೀಮೆಯಲ್ಲಿರುವ ಪುಟ್ಟ ಗ್ರಾಮ. ನಮ್ಮದು ಅಲ್ಲಿದ್ದ ಒಂದು ತುಂಬು ಕುಟುಂಬ. ಮನೆ ತುಂಬಾ ಮಕ್ಕಳು. ಅಷ್ಟೇ ಬಡತನ. ಆದರೆ ಪ್ರೀತಿಗೆ ಯಾವುದೇ ಕೊರತೆ ಇರಲಿಲ್ಲ. ಆಗ ಯುಗಾದಿ ಹಬ್ಬ ಬಂದರೆ ಸಾಕು. ನಮ್ಮ ಸಡಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಯುಗಾದಿ ಹಬ್ಬದ ದಿನ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಏಳುತ್ತಿದ್ದ ನನ್ನ ಅಮ್ಮ ಸ್ನಾನ ಮಾಡಿ, ಮಡಿಯಿಂದ ಸೌದೆ ಒಲೆಯಲ್ಲಿ ಒಬ್ಬಟ್ಟು ಬೇಯಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಆ ದಿನ ಮುಂಜಾನೆ ಏಳುತ್ತಿದ್ದ ನಾವು ಎದ್ದ ತಕ್ಷಣ ದೊಡ್ಡ ಮಂಕರಿಯಲ್ಲಿರುತ್ತಿದ್ದ ಒಬ್ಬಟ್ಟು (ಹೋಳಿಗೆ) ನೋಡಿ ತುಂಬಾ ಖುಷಿ ಪಡುತ್ತಿದ್ದೆವು. ಆಗ ಹಬ್ಬದ ದಿನಗಳಲ್ಲಿ ರಾತ್ರಿಯಡೀ ಬಟ್ಟೆಗಳನ್ನು ಹೊಲೆಯುತ್ತಿದ್ದ ನನ್ನ ಅಣ್ಣ ನನಗೂ ಹೊಸ ಬಟ್ಟೆಯನ್ನು ಹೊಲೆದು ಕೊಡುತ್ತಿದ್ದರು. ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಅಮ್ಮ ಮಾಡುತ್ತಿದ್ದ ಒಬ್ಬಟ್ಟಿನ ಹೂರಣ ತಿನ್ನುವುದೇ ನನ್ನ ಕೆಲಸವಾಗುತ್ತಿತ್ತು. ಯುಗಾದಿಯಂದು ಅಮ್ಮ ನನ್ನ ಮೈಗೆ ಹರಳೆಣ್ಣೆ ಹಚ್ಚಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ನನಗೋ ಖುಷಿಯೋ ಖುಷಿ. ಅಂದು ನಾನು ಊರ ತುಂಬಾ ಓಡಾಡುವುದೇ ನನ್ನ ಕಾಯಕವಾಗಿತ್ತು.
ಯುಗಾದಿ ಎಂದರೆ ಹಿಂಧೂಗಳ ಪಾಲಿಗೆ ಬರುವ ಬಹು ದೊಡ್ಡ ಹಬ್ಬ. ಅಷ್ಟೇ ಅಲ್ಲ, ಅಂದಿನಿಂದಲೇ ನಮಗೆ ನಿಜವಾಗಿ ಹೊಸ ವರ್ಷ ಆರಂಭವಾಗುವುದು. ಯುಗಾದಿಯಲ್ಲಿ ಚಾಂದ್ರಮಾನ ಮತ್ತು ಸೌರಮಾನ ಎಂಬ ಎರೆಡು ದಿನಗಳನ್ನು ಕಾಣಬಹುದು. ನಮ್ಮ ರಾಜ್ಯದಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುವ ಪದ್ದತಿ ಇದೆ. ಚಂದ್ರನ ಚಲನೆಯನ್ನು ಆಧರಿಸಿ ದಿನಗಣನೆ ಮಾಡುವುದನ್ನು ‘ಚಾಂದ್ರಮಾನ’ ಎನ್ನಲಾಗುತ್ತದೆ.
ನಮ್ಮ ಗ್ರಾಮೀಣ ಪ್ರದೇಶದಲ್ಲಿ ಯುಗಾದಿಯನ್ನು ‘ಉಗಾದಿ’ ಎಂದು ಸಹ ಕರೆಯಲಾಗುತ್ತದೆ. ಇದು ಚೈತ್ರ ಮಾಸದ ಮೊದಲ ದಿನವಾಗಿದೆ. ಯುಗಾದಿ ಎಂಬುದು ಹೊಸ ಯುಗದ ಹಾದಿ ಎಂಬ ಅರ್ಥವನ್ನು ಕೊಡುತ್ತದೆ. ಅದು ಗಿಡ ಮರಗಳು ಚಿಗುರುವ ಸಮಯ. ಎಲ್ಲೆಡೆ ಪ್ರಕೃತಿ ಹಸಿರು ನಮ್ಮನ್ನು ಸೆಳೆಯುತ್ತದೆ. ಆ ಕಾಲದಲ್ಲಿ ನಮ್ಮೂರಿನ ಮರಗಿಡಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುವುದೇ ನಮಗೆ ಸೊಗಸಾದ ಅನುಭವವಾಗಿತ್ತು. ಒಬ್ಬಟ್ಟು ತಿಂದು ಹೊಂಗೆ ಮತ್ತು ಹುಣಸೇ ಮರದ ಕೆಳಗೆ ಗೆಳೆಯರ ಜೊತೆ ಆಟ ಆಡುತ್ತಿದ್ದ ನೆನಪು ಈಗಲೂ ನನ್ನನ್ನು ಕಾಡುತ್ತಿರುತ್ತದೆ. ಈಗ ನಗರದ ಮಕ್ಕಳಿಗೆ ಇಂತಹ ಅನುಭವ ತುಂಬಾ ವಿರಳ.
ಸಾಮಾನ್ಯವಾಗಿ ಯುಗಾದಿ ಹಬ್ಬವನ್ನು ನಮ್ಮ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟçಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಮಹಾರಾಷ್ಟçದಲ್ಲಿ ಯುಗಾದಿಯನ್ನು ‘ಗುಡಿಪಾಡ್’ ಎಂದು ಕರೆಯಲಾಗುತ್ತದೆ. ಅಲ್ಲಿ ಒಂದು ಕೋಲಿಗೆ ಬಟ್ಟೆ ಸುತ್ತಿ ಪೂಜಿಸುವ ಸಂಪ್ರದಾಯವಿದೆ. ರಾಜ್ಯದ ಹಲವೆಡೆಗಳಲ್ಲಿ ರೈತರು ಅಂದು ನೇಗಿಲಿನಿಂದ ಭೂಮಿಯನ್ನು ಉಳಿಮೆ ಮಾಡುವಂತಹ ಪದ್ದತಿ ಇದೆ. ಇದನ್ನು ‘ಹೊನ್ನಾರು’ ಎನ್ನಲಾಗುತ್ತದೆ. ನಮ್ಮೂರಲ್ಲೂ ಹೊನ್ನಾರು ಸಂಪ್ರದಾಯವಿದೆ. ಅಂದು ಮೊಟ್ಟ ಮೊದಲು ಭೂಮಿಯನ್ನು ಉಳಿಮೆ ಮಾಡಿದರೆ ಶುಭ ಫಲ ಲಭಿಸುತ್ತದೆ ಎಂಬ ನಂಬಿಕೆಯಿದೆ.
ಯುಗಾದಿ ದಿನ ಎಲ್ಲರ ಮನೆಗಳ ಬಾಗಿಲಲ್ಲಿ ಹಸಿರು ತಳಿರು ತೋರಣಗಳು ಕಂಗೊಳಿಸುತ್ತಿದ್ದವು. ಇದು ಪ್ರಕೃತಿಯನ್ನು ಗೌರವಿಸುವುದರ ಸಂಕೇತದAತೆ ಕಂಡು ಬರುತ್ತಿತ್ತು. ಜೊತೆಗೆ ವಸಂತ ಮಾಸ ಬಂದ ಬಗ್ಗೆ ಜನರಿಗೆ ಅರಿವು ಮೂಡಿಸುವಂತಿತ್ತು. ಮಾವು ಬೇವು ಬೆಲ್ಲಗಳ ಸಂಗಮವನ್ನು ಈ ಯುಗಾದಿ ಹಬ್ಬದ ದಿನ ಕಾಣಬಹುದು.
ಅಂದು ಊರಿನ ಎಲ್ಲರ ಮನೆಗಳ ಮುಂದೆ ವಿವಿಧ ರೀತಿಯ ರಂಗೋಲಿಗಳ ರಂಗು ನೋಡುವುದೇ ಬಲು ಸೊಗಸು. ಅದೇ ರೀತಿ ನಮ್ಮ ಮನೆಯ ಬಾಗಿಲಲ್ಲೂ ಹಸಿರ ಮಾವಿನ ತೋರಣ ನಾನು ಎದ್ದು ನೋಡುವುದರಲ್ಲಿ ಚಂದವಾಗಿ ಕಾಣುತ್ತಿತ್ತು. ನನ್ನ ಅಕ್ಕ ತಂಗಿಯರು ಮನೆ ಮುಂದೆ ಸುಂದರವಾಗಿ ಪೈಪೋಟಿಯಿಂದ ರಂಗೋಲಿಯ ಚಿತ್ತಾರ ಮೂಡಿಸುತ್ತಿದ್ದರು. ಅದರಲ್ಲಿ ಯುಗಾದಿ ಹಬ್ಬದ ಶುಭಾಶಯಗಳು ಎಂದು ಸುಂದರವಾಗಿ ಬರೆಯುತ್ತಿದ್ದರು. ಈಗ ಎಲ್ಲಾ ಜನರೂ ಮೊಬೈಲ್‌ನಲ್ಲಿಯೇ ಶುಭಾಶಯದ ಸಂದೇಶ ಕಳಿಸಿ ಸುಮ್ಮನಾಗುತ್ತಾರೆ.
ಯುಗಾದಿ ಹಬ್ಬದ ದಿನ ಊರಿನ ಎಲ್ಲರೂ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಂತಸಪಡುವುದನ್ನು ನೋಡಬಹುದು. ಸೂರ್ಯ ನಮಸ್ಕಾರ, ದೇವರ ಪೂಜೆ ಮತ್ತು ಪಂಚಾಂಗ ಪೂಜೆ ಮಾಡುವ ಜನರು ಅಂದು ವಿಶೇಷವಾಗಿ ಬೇವು ಬೆಲ್ಲವನ್ನು ತಿನ್ನುವ ಸಂಪ್ರದಾಯದ ಆಚರಣೆ ಮಾಡುತ್ತಾರೆ.
ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ತಿನ್ನುವಾಗ ಈ ಕೆಳಗಿನ ಶ್ಲೋಕವನ್ನು ಹೇಳುವುದು ಶುಭ ಎಂದು ಶಾಸ್ತçಗಳು ಹೇಳುತ್ತವೆ.
ಶತಾಯು ವಜ್ರದೇಹಾಯ ಸರ್ವಸಂಪತ್ಯರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ
ಇದರ ಅರ್ಥ ನಾನು ನೂರು ವರ್ಷಗಳ ಆಯುಷ್ಯ, ಆರೋಗ್ಯ, ಸಂಪತ್ತುಗಳ ಪ್ರಾಪ್ತಿ ಮತ್ತು ಎಲ್ಲಾ ಸಂಕಷ್ಟ ನಿವಾರಣೆಗಾಗಿ ಬೇವುಬೆಲ್ಲ ಸೇವಿಸುತ್ತಿದ್ದೇನೆ ಎನ್ನುವುದಾಗಿದೆ.
ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ತಿನ್ನುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಅದರ ಪ್ರಕಾರ ಬೆಲ್ಲ ತಿನ್ನುವುದರಿಂದ ನಮ್ಮ ಹೊಟ್ಟೆಯೊಳಗೆ ಉರಿಯ ಜೊತೆಗೆ, ಶಾಖವನ್ನು ಉಂಟು ಮಾಡುತ್ತದೆ. ಹಾಗಾಗಿ ಬೇವು ತಿನ್ನುವುದರಿಂದ ಇದರ ಶಮನವಾಗುತ್ತದೆಂದು ಹೇಳಲಾಗುತ್ತದೆ.
ಅಂದು ನಮ್ಮ ಮನೆಯಲ್ಲಿಯೂ ಅಮ್ಮ ದೇವರ ಬಳಿ ಬೇವುಬೆಲ್ಲವನ್ನು ಇಟ್ಟು ಅದನ್ನು ಪೂಜೆಯ ನಂತರ ತಿನ್ನಲು ಕೊಡುತ್ತಿದ್ದರು. ಆ ಸಮಯದಲ್ಲಿ ಅಮ್ಮ ಹೇಳುತ್ತಿದ್ದ ಮಾತು ಈಗಲೂ ನೆನಪಿನಲ್ಲಿದೆ. ಜೀವನದಲ್ಲಿ ಕಷ್ಟ ಸುಖಗಳನ್ನು ಈ ಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸಬೇಕು. ಕಷ್ಟ ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಬಾಳಬೇಕು ಎಂದು ನನ್ನ ಅಮ್ಮ ನಮಗೆ ಬಾಲ್ಯದಲ್ಲಿಯೇ ತಿಳುವಳಿಕೆ ನೀಡುತ್ತಿದ್ದರು. ಅಮ್ಮ ಓದಿಲ್ಲದಿದ್ದರೂ ಕೆಲವು ಆಚಾರ ವಿಚಾರಗಳನ್ನು ತಿಳಿದಿದ್ದರು. ಮಕ್ಕಳಿಗೂ ಆಗಾಗ ಹೇಳುತ್ತಿದ್ದರು.
ಯುಗಾದಿ ಹಬ್ಬದ ಕಾಲದಲ್ಲಿ ಹೊಸ ಪಂಚಾಂಗವನ್ನು ಪ್ರಕಟಿಸುವ ಸಂಪ್ರದಾಯವಿದೆ. ಅಂದು ಆ ಪಂಚಾಂಗವನ್ನು ಹಲವು ಊರುಗಳಲ್ಲಿ ಓದಿ ಹೇಳುವ ಪದ್ದತಿಯನ್ನು ನೋಡಬಹುದು. ಅದೇ ರೀತಿ ಆ ದಿನ ಸಂಜೆಯಾಗುತ್ತಿದ್ದAತೆಯೇ ನನ್ನೂರಿನ ಜನರೆಲ್ಲಾ ಒಟ್ಟಿಗೆ ಒಂದೆಡೆ ಸೇರುತ್ತಿದ್ದರು. ಆಗ ಜೋಯಿಸರು ಬಂದು ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸಿ, ಪಂಚಾಂಗ ಓದಿ ವರ್ಷದ ಆಗು ಹೋಗುಗಳನ್ನು ತಿಳಿಸುತ್ತಿದ್ದರು.
ಆ ವರ್ಷದ ಮಳೆ, ಬೆಳೆ, ರಾಶಿ ಭವಿಷ್ಯ, ಆದಾಯ ವ್ಯಯ, ಒಳ್ಳೆಯ ಮುಹೂರ್ತ ಮುಂತಾದ ವಿಷಯಗಳ ಬಗ್ಗೆ ಆಗ ತಿಳಿಸಲಾಗುತ್ತಿತ್ತು. ಈಗೆಲ್ಲಾ ಟಿವಿಗಳಲ್ಲಿ ಜೋತಿಷಿಗಳು ಯುಗಾದಿ ಭವಿಷ್ಯ ಹೇಳುವುದನ್ನು ನೋಡಿದ್ದೇವೆ. ಆಗ ಟಿವಿ ಚಾನಲ್‌ಗಳ ಅಬ್ಬರ ಇರಲಿಲ್ಲ. ಹಾಗಾಗಿ ಜೋಯಿಸರು ಪಂಚಾಂಗ ಓದಿ ಹೇಳುವುದನ್ನೇ ಜನರು ಕಾತರದಿಂದ ಕಾಯುತ್ತಿದ್ದರು.
ಯುಗಾದಿ ಹಬ್ಬದ ಮಾರನೇ ದಿನ ನಡೆಯುವ ವರ್ಷದ ತೊಡಕು ಎಂದರೆ ಎಲ್ಲರಿಗೂ ಬಹಳ ಇಷ್ಟ. ಏಕೆಂದರೆ ಅಂದು ಎಲ್ಲರ ಮನೆಗಳಲ್ಲಿ ಮಾಂಸಾಹಾರ ಮಾಡುತ್ತಿದ್ದರು. ನಮ್ಮೂರಿನ ಹತ್ತಿರದ ಮತ್ತೊಂದು ಗ್ರಾಮಕ್ಕೆ ಹೋಗಿ ಮಾಂಸ ತರಬೇಕಿತ್ತು ಅಥವಾ ಸುಮಾರು ಹನ್ನೆರೆಡು ಕಿಲೋ ಮೀಟರ್ ದೂರದ ತಾಲ್ಲೂಕು ಕೇಂದ್ರಕ್ಕೆ ಬಸ್ಸಿನಲ್ಲಿ ಹೋಗಿ ಬರಬೇಕಾಗಿತ್ತು. ಆಗ ಮಾಂಸ ತರುವುದೇ ಬಹಳ ದೊಡ್ಡ ಪ್ರಯಾಸದ ಕೆಲಸವಾಗಿತ್ತು. ಏಕೆಂದರೆ ಊರಿನ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರು ಎಲ್ಲರೂ ನಮ್ಮೂರ ಸಮೀಪದ ಗ್ರಾಮದಲ್ಲಿದ್ದ ಒಂದೆರೆಡು ಮಾಂಸದ ಅಂಗಡಿಗೇ ಹೋಗಬೇಕಾಗಿತ್ತು. ಮಾಂಸದ ಅಂಗಡಿ ಮುಂದೆ ಅಂದು ಜನವೋ ಜನ..! ಸಾಹೇಬರು ಮರಿ ಕುಯ್ಯುವುದೇ ತಡ ಜನರು ನಾ ಮುಂದು ತಾ ಮುಂದು ಎಂದು ಮಾಂಸ ಕೊಳ್ಳುತ್ತಿದ್ದ ದೃಶ್ಯ ನೆನಪಾದಾಗ ಈಗಲೂ ನನಗೆ ನಗು ಬರುತ್ತದೆ.
ಚಿಕ್ಕ ವಯಸ್ಸಿನಲ್ಲಿ ನನಗೂ ಆ ದಿನ ತುಂಬಾ ಖುಷಿ ಕೊಡುತ್ತಿತ್ತು. ಅಣ್ಣ ಕೊಡುತ್ತಿದ್ದ ಹಣ ತೆಗೆದುಕೊಂಡು ಹೋಗಿ ಮಾಂಸ ತರುವ ಕೆಲಸ ನನ್ನದಾಗಿತ್ತು. ಕಾದು ಕಾದು ಕೊನೆಗೂ ಮಾಂಸ ತಂದು ಅಮ್ಮ ಮಾಡಿದ ಊಟ ಸವಿಯುತ್ತಿದ್ದ ನೆನಪು ಈಗಲೂ ನನಗೆ ಖುಷಿ ಎನಿಸುತ್ತದೆ.
ಇನ್ನು ಕೆಲವರು ಮಧ್ಯಪಾನ ಮಾಡಿ, ಬಾಡೂಟ ಸವಿದು ಇಸ್ಪೀಟು, ಹುಣಸೇ ಬೇಳೆಯ ಬೆಸ ಸರಿ ಆಟ ಆಡುತ್ತಿದ್ದ ದೃಶ್ಯ ಊರಿನ ಅನೇಕ ಕಡೆ ಕಂಡು ಬರುತ್ತಿತ್ತು. ಆ ಕಾಲದಲ್ಲಿ ಜನರು ತುಂಬಾ ನೆಮ್ಮದಿಯಿಂದ ಆಟದಲ್ಲಿ ತಲ್ಲೀನರಾಗುತ್ತಿದ್ದರು. ಏಕೆಂದರೆ ಆಗ ಮೊಬೈಲ್‌ಗಳ ಕಾಟ, ಟಿವಿಗಳ ಅಬ್ಬರ ಇರಲಿಲ್ಲ…!
ಕೊನೆಯದಾಗಿ ಹಬ್ಬದ ಎರಡನೇ ದಿನ ಆಗಸದಲ್ಲಿ ಚಂದ್ರನನ್ನು ನೋಡುತ್ತಾರೆ. ಆ ಚಂದ್ರನ ಆಕೃತಿಯನ್ನು ನೋಡಿ ಆ ವರ್ಷದಲ್ಲಿ ಮಳೆ ಬೆಳೆ ಮತ್ತು ಸಂಪತ್ತಿನ ಬಗ್ಗೆ ಜನರು ಭವಿಷ್ಯ ಹೇಳುತ್ತಿದ್ದರು. ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಅಮ್ಮನೂ ಸಹ ಅಂದು ನಮಗೆಲ್ಲಾ ಚಂದ್ರನನ್ನು ತೋರಿಸಿ ಮುಂದಿನ ಆಗು ಹೋಗುಗಳ ಬಗ್ಗೆ ಹೇಳುತ್ತಿದ್ದರು. ಈಗಲೂ ಕೆಲವೆಡೆಗಳಲ್ಲಿ ಚಂದ್ರನನ್ನು ನೋಡಿ ಕಡಲೇಹಿಟ್ಟು ಹಂಚಿ ಜನರು ಪರಸ್ಪರ ಸಂತಸ ಪಡುವುದನ್ನು ನಾನು ನೋಡಿದ್ದೇನೆ.
ಚಂದ್ರ ಕೆಳಕ್ಕೆ ಬಿದ್ದ ದಿಕ್ಕಿನಲ್ಲಿ ಮಳೆ ಬೆಳೆ ಕಡಿಮೆಯಾಗುತ್ತದೆ. ಚಂದ್ರ ಮೇಲಕ್ಕೆ ಎದ್ದ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ನಮ್ಮ ಗ್ರಾಮೀಣರಲ್ಲಿದೆ.
ಅದೇನೇ ಇರಲಿ, ನಮ್ಮ ಬಾಲ್ಯದ ಯುಗಾದಿ ಸಡಗರವೇ ಬೇರೆ. ಈಗಿನ ಯುಗಾದಿ ಸಂಭ್ರಮವೇ ಬೇರೆ. ಇಂದಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಆಚರಣೆಗೆ ಯಾವುದೇ ಕೊರತೆಯಿಲ್ಲ. ಆದರೆ ಪ್ರೀತಿಯ ಕೊರತೆ ಎದ್ದು ಕಾಣುತ್ತದೆ. ಇಂದಿನ ಕಾಲದಲ್ಲಿ ಎಲ್ಲರ ಬಳಿ ಹಣವಿದ್ದರೂ ಸಹ ಪರಸ್ಪರ ಸಂಬAಧಗಳ ಬಿರುಕು ಮತ್ತು ಹಬ್ಬದ ಸಡಗರ, ಸಂಭ್ರಮ ಇಲ್ಲದಂತಾಗಿದೆ. ನನಗೆ ಈಗ ಅಮ್ಮನಿಲ್ಲದ ಯುಗಾದಿ ಬರೀ ಆಚರಣೆಗಷ್ಟೇ ಸೀಮಿತವೆನಿಸುತ್ತದೆ. ಅಂದು ನಮ್ಮ ಮನೆ ಬಾಗಿಲಲ್ಲಿ ಕಟ್ಟುವ ತಳಿರು ತೋರಣದಲ್ಲಿ ಅಮ್ಮನ ನೆನಪು ಹಚ್ಚ ಹಸಿರಿನಂತೆ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ…!
ವರುಷಕೊಂದು ಹೊಸತು ಜನ್ಮ
ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ…
ಒಂದೇ ಒಂದು ಜನ್ಮದಲ್ಲಿ ಒಂದೆ ಬಾಲ್ಯ
ಒಂದೆ ಹರೆಯ ನಮಗದಷ್ಟೆ ಏತಕೋ…
ನಮ್ಮ ಪ್ರಸಿದ್ದ ಕವಿ ದ.ರಾ.ಬೇಂದ್ರೆ ಅವರ ಈ ಯುಗಾದಿ ಕವಿತೆ ನಿಜಕ್ಕೂ ನಮ್ಮ ಮನ ತಟ್ಟುತ್ತದೆ. ಅಷ್ಟೇ ಅಲ್ಲ, ಆ ಕವನದ ಪ್ರತಿಯೊಂದು ಸಾಲುಗಳ ಅರ್ಥಗಳು ನಮ್ಮನ್ನು ಸದಾ ಕಾಡುತ್ತವೆ ಮತ್ತು ಚಿಂತನೆಗೀಡು ಮಾಡುತ್ತವೆ. ಅಲ್ಲವೇ?


