ಬೆಂಗಳೂರು : ಚಿತ್ರನಟರು, ಸಾಧಕರು ಹಾಗೂ ಗಣ್ಯರು ಸಮಾಜದ ಸ್ವಾಸ್ಥ್ಯ ಹಾಳುಗೆಡುಹುವ ಜಾಹಿರಾತುಗಳಲ್ಲಿ ನಟಿಸುವ ಮುನ್ನ ಡಾ. ರಾಜಕುಮಾರ್ ಅವರ ಮಾದರಿಯನ್ನು ಅನುಸರಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ‘ಹಸಿರು ಸಿರಿ ಸಾಂಸ್ಕೃತಿಕ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ಯಾನ್ಸರ್ ಕಾರಕ ಉತ್ಪನ್ನಗಳ ಜಾಹೀರಾತು ಸೇರಿದಂತೆ, ಜನರಿಗೆ ತಪ್ಪು ಸಂದೇಶ ನೀಡುವ ಜಾಹಿರಾತುಗಳಲ್ಲಿ ಅಭಿನಯಿಸುವುದರಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಸ್ವಸ್ಥ ಸಮಾಜಕ್ಕೆ ಧಕ್ಕೆಯಾಗದ ಜಾಹೀರಾತಿಗಳಲ್ಲಿ ಅಭಿನಯಿಸುವ ಕಡೆಗೆ ಆಲೋಚಿಸಬೇಕು ಎಂದರು.
‘ಹಸಿರು ಸಿರಿ ಪುರಸ್ಕಾರ’ ಪಡೆದಿರುವ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಮತ್ತು ಸಾಹಿತ್ಯ ಪರಿಚಾರಕ ಜೀವನ್ಮುಖಿ ಸುರೇಶ್ ಅವರ ಸೇವೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಜೀವನ್ಮುಖಿ ಸುರೇಶ್ ಸದಾ ಸಮಾಜಮುಖಿಯಾದ ಕಾರ್ಯಗಳನ್ನು ಮಾಡುವ ಮೂಲಕ ಸಾಂಸ್ಕೃತಿಕ ಲೋಕವನ್ನು ವಿಸ್ತರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ತಮಾನದ ಸಂದರ್ಭದಲ್ಲಿ ಇವರ ಕಾರ್ಯ ಚಟುವಟಿಕೆಗಳು ಮಾದರಿಯಾಗಿವೆ. ಜೀವನ್ಮುಖಿ ಪ್ರತಿಕೆ ಸದಭಿರುಚಿ ಪ್ರಚೋದಿಸುತ್ತಿದ್ದಾರೆ. ದಲಿತ ಕವಿ ಸಿದ್ದಲಿಂಗಯ್ಯನವರ ‘ಊರುಕೇರಿ’ ಕೃತಿಯ ಅಧ್ಯಾಯಗಳನ್ನು ಪತ್ರಿಕೆಯ ಅಂಕಣದಲ್ಲಿ ಪುನರ್ ಪ್ರಕಟಿಸುವ ಮುಖೇನ ಜನ ಸಾಮಾನ್ಯರಿಗೂ ತಲುಪಿಸುತ್ತಿದ್ದಾರೆ. ತಮ್ಮ ಕೃತಿಯ ಬರಹಗಳಿಗೆ ಪತ್ರಿಕೆಯ ಓದುಗರು ನೀಡುತ್ತಿದ್ದ ಪ್ರತಿಸ್ಪಂದನೆಗೆ ಸಿದ್ದಲಿಂಗಯ್ಯ ಅವರೂ ಕೂಡ ನನ್ನೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದರು ಎಂದು ಶ್ಲಾಘಿಸಿದರು.
ಆಶೀರ್ವಚನ ನೀಡಿ ಮಾತನಾಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ. ನಿಶ್ಚಲಾನಂದ ಸ್ವಾಮೀಜಿಯವರು, ಪ್ರಾಮಾಣಿಕತೆ ಹಾಗೂ ಬದ್ದತೆಗೆ ಸಮಾಜದಲ್ಲಿ ಮನ್ನಣೆ ಸಿಗಬೇಕು. ಯುವಜನರು ತಮ್ಮ ಬದುಕು ಹಳಿ ತಪ್ಪದಂತೆ ಪ್ರಬಲವಾಗಿ ರೂಪಿಸಿಕೊಳ್ಳಬೇಕು. ಸಂಘಟನಾತ್ಮಕವಾದ ಕಾರ್ಯಸೂಚಿಯೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಬೇಕೆಂದು ಕರೆ ನೀಡಿದರು.
ಪ್ರಶಸ್ತಿ ಪುರಸ್ಕೃತ ರಾದ ಜೀವನ್ಮುಖಿ ಸುರೇಶ್ ಅವರು ಪತ್ರಕರ್ತರಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಯಲ್ಲಿ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಅವರ ವೃತ್ತಿ ಬದ್ಧತೆ ಹಾಗೂ ಸೇವಾ ನಿಷ್ಠ ಪ್ರಾಮಾಣಿಕತೆ ಮೆಚ್ಚುವಂತಿದೆ. ಅವರ ಸೇವಾ ಕಾರ್ಯ ಉತ್ತಮ ಸಮಾಜದ ನಿರ್ಮಾಣಕ್ಕೆ ವಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಎಸ್. ದಿವಾಕರ್, ಸಾಂಸ್ಕೃತಿಕ ಸಂಘಟಕ ಜೀವನ್ಮುಖಿ ಸುರೇಶ್ ಮತ್ತು ಚಲನಚಿತ್ರ ನಟ ಶಿವರಾಜ್ ಕೆ.ಆರ್. ಪೇಟೆ ಅವರಿಗೆ ‘ಹಸಿರು ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ತ್ವರಿತ ಕಾರ್ಯಾಚರಣೆ ಪಡೆಯ ಮುಖ್ಯಸ್ಥ ಹಾಗೂ ಡಿಐಜಿಪಿ ಡಾ.ಎ.ಎನ್. ಪ್ರಕಾಶ್ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಮಳವಳ್ಳಿಯ ಮಾಜಿ ಶಾಸಕ ಡಾ.ಕೆ. ಅನ್ನದಾನಿ, ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ, ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ರಘುನಂದನ್ ಉಪಸ್ಥಿತರಿದ್ದರು.

