



ಬೆಂಗಳೂರು: ಕನ್ನಡ ಕಟ್ಟುವ ಕ್ರಿಯೆಯಲ್ಲಿ ಸಾಹಿತ್ಯಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕುವೆಂಪು ಸಾಂಸ್ಕೃತಿಕ ವೇದಿಕೆ ರಾಜ್ಯ ಮಟ್ಟದ ಕವಿ ಸಮ್ಮೇಳನ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ಸಾಹಿತಿ ಡಾ ಆರ್ ಕೆ ನಲ್ಲೂರ್ ಪ್ರಸಾದ್ ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಒಂದು ದಿನದ ರಾಜ್ಯ ಮಟ್ಟದ ಕವಿ ಸಮ್ಮೇಳನ ಉದ್ಘಾಟಿಸಿ ಡಾ ಕೆ ಆರ್ ನಲ್ಲೂರು ಪ್ರಸಾದ್ ಮಾತನಾಡಿದರು. ನಿರಂತರ ಸಾಹಿತ್ಯ ಚಟುವಟಿಕೆಗಳು ಕನ್ನಡದ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಕನ್ನಡ ನೆಲ, ಜಲದ ಬಗೆಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಜಾಗೃತ ಭಾವ ಕನ್ನಡ ಸಂಸ್ಕೃತಿಯನ್ನು ಉಳಿಸುತ್ತದೆ ಎಂದರು.
ಕುವೆಂಪು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜೀವನ್ಮುಖಿ ಸುರೇಶ್ ಮಾತನಾಡಿ ಕವಿ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಆಯಾ ಭಾಗದ ಕವಿಗಳ ಪರಿಸರ, ತಲ್ಲಣಗಳು, ಆತಂಕಗಳನ್ನು, ಹೊಸ ಹೊಳಹುಗಳನ್ನು ವೈವಿಧ್ಯಮಯ ಭಾಷಾ ಸೊಗಡಿನಲ್ಲಿ ಅಭಿವ್ಯಕ್ತಿಸಲು ಅವಕಾಶ ಮಾಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದೆ. ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಚಟುವಟಿಕೆಗಳು ನಡೆಯಬೇಕು ಎಂದರು.
ನಾಗವೀಣಾ ಸಮ್ಮೇಳನಾಧ್ಯಕ್ಷತೆಯನ್ನು ಡಾ ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಡಾ ಮಣಿಶ್ರೀ, ಚಿತ್ರ ಕಲಾವಿದೆ ನಾಗರತ್ನ ಕಲಾಧಾರೆ ಹಾಗೂ ಕವಿ ಸತೀಶ್ ಜವರೇಗೌಡ ಉಪಸ್ಥಿತರಿದ್ದರು.
ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಭಾವನೆಗಳಿಂದ ದೂರವಾಗುತ್ತಿದ್ದಾನೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಇಂತಹ ಸಮಯದಲ್ಲಿ ಕವಿತೆಗಳು ಮನಸ್ಸನ್ನು ಮೃದುಗೊಳಿಸುವ, ಪರಸ್ಪರ ಪ್ರೀತಿಯನ್ನು ಬೆಸೆಯುವ ಮತ್ತು ವೈಚಾರಿಕತೆಯನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಉದ್ಘಾಟನಾ ಸಮಾರಂಭದ ನಂತರ ನಡೆದ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಕುವೆಂಪು ಸಮಾಜಮುಖಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಸಂಪಾದಕರಾದ ಮಂಜುನಾಥ್ ದಂಡಿನಶಿವರ ಅಭಿಪ್ರಾಯಪಟ್ಟರು.
ನಿಮ್ಮ ಲೇಖನಿ ಕೇವಲ ಪ್ರಾಸಕ್ಕಾಗಿ ಬರೆಯದೆ, ಸಮಾಜದ ಬದಲಾವಣೆಗೆ ಪ್ರೇರಕವಾಗಲಿ. ನಿಮ್ಮ ಅಕ್ಷರಗಳು ಕತ್ತಲಲ್ಲಿರುವವರಿಗೆ ಬೆಳಕಾಗಲಿ, ದನಿಯಿಲ್ಲದವರಿಗೆ ದನಿಯಾಗಲಿ. ಸಾಹಿತ್ಯ ಎಂಬುದು ಒಂದು ನಿರಂತರ ತಪಸ್ಸು, ಅದನ್ನು ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿಸಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಸತೀಶ್ ಜವರೇಗೌಡ ವಹಿಸಿ, ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ತೋಟಗಾರಿಕೆ ಇಲಾಖೆಯ ಅಪರ ನಿದೇಶಕರಾದ ಡಾ.ಎಂ.ಜಗದೀಶ್ ಕುವೆಂಪು ಸಮಾಜಮುಖಿ ಪ್ರಶಸ್ತಿ ನೀಡಿ ಗೌರವಿಸಿದರು. ಲೇಖಕಿ ಶ್ರೀಮತಿ ಸುಜಾತ ಎಸ್.ಎನ್.ರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಪಲ್ಲವಿ ವಿ.ಆರ್, ಶ್ರೀಮತಿ ಭಾರತಿ ಶಂಕರ್, ಶ್ರೀಮತಿ ಉಮಾ ಬಿ.ಎನ್, ಮೈಸೂರು ರಮಾನಂದ್, ಎಂ.ಎಸ್.ಧಮೇಂದ್ರ ಅವರುಗಳಿಗೆ ಕುವೆಂಪು ಸಮಾಜಮುಖಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ರಾಜ್ಯದ ಹಲವೆಡೆಗಳಿಂದ ಬಂದಿದ್ದ ಕವಿಗಳು ಸಭೆಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ನಂತರ ಮೈಸೂರು ರಮಾನಂದ್ ಅವರ ಗೆಜ್ಜೆಹೆಜ್ಜೆ ತಂಡದವರಿಂದ ಹಾಸ್ಯ ಚಿಂತನೆ ನಾಟಕ ಅಭಿನಯಿಸಲ್ಪಟ್ಟಿತು.
