-ಹಡವನಹಳ್ಳಿ ವೀರಣ್ಣಗೌಡ
ಅಗತ್ಯವಿದ್ದಷ್ಟನ್ನು ಗಳಿಸಿ ಬದುಕಬೇಕಾದ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ತನಗಷ್ಟೆ ಅಲ್ಲ, ತನ್ನ ಮಕ್ಕಳಿಗಷ್ಟೆ ಅಲ್ಲ, ಮಮ್ಮೊಕ್ಕಳಿಗೂ, ಮರಿಮಕ್ಕಳಿಗೂ, ಸಾಧ್ಯವಾದರೆ ಅವರ ಮುಂದಿನ ತಲೆಮಾರುಗಳಿಗೂ ಕೂಡಿಡುವ ದುರಾಸೆಯ ಬೆನ್ನತ್ತಿ ದಿನದಿನಕ್ಕೂ ತನ್ನ ಖುಷಿಯ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾನೆ. ಎಲ್ಲದೂ ತನಗೆ ಬೇಕೆಂದು ಬಾಚಿ ಗುಡ್ಡೆಯಾಕಿಕೊಳ್ಳುವ ಮಟ್ಟಕ್ಕೆ ಆತುವರಿಯುವ ಮನಾಸಿಕತೆಗೆ ತಲುಪಿದ್ದಾನೆ. ಹಂಚಿತಿನ್ನುವ ಆನಂದ ಅವನಿಗೆ ಬೇಕಾಗಿಲ್ಲ. ಜೊತೆಗಿದ್ದವರನ್ನು ವಂಚಿಸಿ ಸಿಕ್ಕಿದ್ದನ್ನೆಲ್ಲ ಮುಕ್ಕಿ ತಾನಷ್ಟೆ ಅನುಭವಿಸುವ ಹಂತಕ್ಕೆ ಬಂದು ನಿಂತಿದ್ದಾನೆ. ಈಗವನು ಒಳ್ಳೆಯದು, ಕೆಟ್ಟದ್ದರ ಬಗ್ಗೆ ಯೋಚನೆಯನ್ನೂ ಮಾಡಲಾರ, ಅವನಿಗೆ ತಾನು ಮಾಡುವ ಹಾಗೂ ಮಡಿರುವ ಅನಾಚಾರಗಳ ಬಗ್ಗೆ ಪಾಪಪ್ರಜ್ಞೆಯೂ ಇಲ್ಲ, ಪಶ್ಚತಾಪವೂ ಇಲ್ಲ. ಏನೇ ತಪ್ಪುಗಳನ್ನು ಮಾಡಿದರು ಅದಕ್ಕೊಂದು ಸಮರ್ಥನೆ ಕೊಡುವ, ಆ ಮೂಲಕ ತನ್ನದೇನು ಇದರಲ್ಲಿ ಪಾತ್ರವಿಲ್ಲವೆಂದು ತಾನೆ ತನ್ನ ಬೆನ್ನುತಟ್ಟಿಕೊಳ್ಳುತ್ತ ಅದೇ ದಾರಿಯಲ್ಲಿ ನುಗ್ಗುವ ಪ್ರವೃತ್ತಿ ಬೆಳಸಿಕೊಂಡಿದ್ದಾನೆ.
ಸ್ಥಿತಿವಂತನಾಗಬೇಕೆಂಬ ಅಭಿಲಾಷೆ ತಪ್ಪಲ್ಲ. ಅದಕ್ಕಾಗಿ ಅಪಮಾರ್ಗದ ಯತ್ನಗಳು ಸಾದುವಲ್ಲ. ಆದರೆ ಅತಿ ಹೆಚ್ಚಿನವರು ಸಂಪತ್ತುಗಳಿಸಲು ಅಡ್ಡದಾರಿಗಳನ್ನೆ ತುಳಿದಿರುವುದು ವಿಪರ್ಯಾಸ. ಇವರ ಅನೈತಿಕ ನಡವಳಿಕೆಗಳು ಇದ್ದುದ್ದರಲ್ಲಿಯೇ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಸಲ್ಪಸಂಖ್ಯಾತ ನಿಸ್ಪ್ರಹರಿಗೆ ಸಂಕಟಗಳನ್ನು ತಂದೊಡ್ಡುತ್ತಿವೆ.
ಸ್ವಹಿತಾಸಕ್ತಿಯ, ಸಮಯ ಸಾಧಕರ ನಡುವೆ ಸಜ್ಜನರ ಬದುಕು ಕಷ್ಟವಾಗುತ್ತಿದೆ. ‘ಯಾರಂತೆ ಅಂದರೆ ಲೋಕಂತೆ’ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿರುವಾಗ ಯಾರು…ಯಾರಿಗೆ…ಏನನ್ನು ಹೇಳಲು ಸಾಧ್ಯ!?. ತಮ್ಮ ಕಣ್ಣಮುಂದೆಯೇ ಅನ್ಯಾಯ ನೆಡೆಯುತ್ತಿದ್ದರೂ ಕೇಳುವ ಬಾಯಿಗಳು ಮೌನವ್ರತ ಮಾಡುತ್ತಿವೆ. ಯಾರನ್ನಾದರು ಎದುರು ಹಾಕಿಕೊಂಡು ಬದುಕುತ್ತೇವೆಂಬ ಎದೆಗಾರಿಕೆ ನಿಶ್ಯಕ್ತವಾಗಿದೆ. ಪ್ರಶ್ನೆ ಮಾಡಿ ನೆಮ್ಮದಿಯಾಗಿ ಬದುಕುವ ವಾತಾವರಣ ಪ್ರಸ್ತುತ ದಿನಗಳಲ್ಲಿ ಇಲ್ಲವಾಗಿದೆ. ಸಮಾಜ ಸಂಕೀರ್ಣಮಯವಾದ ಪರಿಸ್ಥಿತಿಗೆ ಬಂದು ನಿಂತಿದೆ.
ಹೆಚ್ಚಿನವರು ಸ್ಪರ್ಧೆಗಿಳಿದವರಂತೆ ಗಳಿಸುವ, ಗಳಿಸಿದ್ದನ್ನು ದಕ್ಕಿಸಿಕೊಳ್ಳುವ ದಾಹದಲ್ಲಿದ್ದಾರೆ. ಸ್ವಾರ್ಥಸಾಧನೆಗಾಗಿ ನೂರು ವೇಷಗಳನ್ನಾಕಿ ನಟಿಸುತ್ತಿದ್ದಾರೆ. ಅರಿವಿಲ್ಲದೆ, ಗುರಿಯಿಲ್ಲದೆ ಸಿಕ್ಕಿದ್ದನ್ನೆಲ್ಲ ದೋಚಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಮೋಸಮಾಡಿ ಸಂಪಾದಿಸಿಕೊಳ್ಳುವ ಹಪಾಹಪಿತನ ಮಾನವೀಯ ಸಂಬಂಧಗಳಿಗೆ ಮಾರಕವಾಗುತ್ತಿದೆ. ಇಂತಹ ಲೋಭಿಗಳ ಪಡೆ ಸಮಾಜದ ಉದ್ದಗಲಕ್ಕೂ ಅಶಾಂತಿಯನ್ನು ಹರಡುತ್ತಿದೆ.
ಕಪಟತನದ ಮನಸ್ಸಿನವನು ಯಾರನ್ನು ಹೇಗೆ ಮೋಸದ ಬಲೆಯೊಳಗೆ ಹಾಕಿಕೊಳ್ಳ ಬೇಕು, ಯಾರ ಜೊತೆಗಿದ್ದರೆ ಏನು ಲಾಭವಾಗುತ್ತದೆ, ಯಾರನ್ನು ನಂಬಿಸಿದರೆ ಅವರಿಂದ ಏನನ್ನು ಲಪಟಾಯಿಸಬಹುದು ಇಂತಹ ಮನೆಯಾಳು ಯೋಚನೆಗಳಲ್ಲಿಯೇ ಸದಾ ಮುಳುಗೇಳುತ್ತಿರುತ್ತಾನೆ. ನಂಬಿಕೆ ದ್ರೋಹ ಮಾಡುವುದು ಇಂತಹವರಿಗೆ ಲೀಲಾಜಾಲ. ಇಂತಹ ಕುಕೃತ್ಯಗಳನ್ನು ಮಾಡುತ್ತ ಬದುಕುವ ನಯವಂಚಕರು ನಮ್ಮ ಸುತ್ತಲಿದ್ದರು ಅರಿವಿಗೆ ಬರುವುದರೊಳಗೆ ನಾವೂ ಮೋಸಹೋಗಿರುತ್ತೇವೆ.
ಶ್ರಮವಿಲ್ಲದೆ ಪಾಪದವರ ಮೇಲೆ ಕೈಯಿಟ್ಟು ಚಾಣಕ್ಷತನದಿಂದ ಶ್ರೀಮಂತನಾಗುವ ಅಲ್ಪಮತಿ ಮನುಷ್ಯ ಸಮಾಜದಲ್ಲಿ ಸಣ್ಣದೊಂದು ಸ್ಥಾನಮಾನ ಸಿಕ್ಕರೂ, ತನ್ನ ಅಹಂನ ಪ್ರದರ್ಶನಕ್ಕಿಳಿಯುತ್ತಾನೆ. ತಾನು ಯಾವುದೋ ಮಹಾನ್ ಸಾಧನೆ ಮಾಡಿದವನಂತೆ ಎದುರಿನವರನ್ನು ಕ್ಷುಲ್ಲಕವಾಗಿ ನೋಡುತ್ತ ಗಹಗಹಿಸಿ ನಗುತ್ತಾನೆ. ಮೆರೆಯುವ ಯಾವ ಅವಕಾಶವನ್ನು ಆತ ಬಿಡಲಾರ. ಹೀಗಿರುವಾಗ ದುರಹಂಕಾರದ ಮದ ತಲೆಗೇರಿಸಿಕೊಂಡ ಮನುಷ್ಯ ಹೇಗೆ ನೆಮ್ಮದಿಯಿಂದ ಬದುಕಿಯಾನು…?. ಮಾನವ ಸಮಾಜವು ಅಷ್ಟೆ, ದುರುಳರು ನೆಡೆದು ಬರುತ್ತಿರುವ ವಾಮಮಾರ್ಗಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಹೇಗಾದರು ಬಂದಿರಲಿ ತಲುಪಿರುವ ಸ್ಥಾನಮಾನಗಳ ಬಗ್ಗೆ ಹೆಮ್ಮೆಪಡುತ್ತದೆ.
ನಮ್ಮೊಳಗೆ ಮತ್ತೊಂದು ವರ್ಗವಿದೆ. ಊಟ, ಬಟ್ಟೆ, ಸೂರು, ಆರೋಗ್ಯ ಎಲ್ಲ ಉತ್ತಮವಾಗಿದ್ದರು ಏನು ಇಲ್ಲ ಎಂದು ಕೊರಗುವವರದು. ಇದು ಒಂದೆಒಂದು ಕ್ಷಣವೂ ಸಂತೋಷದಿಂದ ಇರಲಾರದು. ಬೇರೆಯವರ ಏಳಿಗೆ ನೋಡುತ್ತ ಕರುಬುವುದೆ ಈ ವರ್ಗದ ಚಾಳಿ. ಇರುವ ನೆಮ್ಮದಿಯನ್ನು ಕಳೆದುಕೊಂಡು ಸದಾ ಚಡಪಡಿಸುತ್ತ ತಾನು ಸುಖಿಯಾಗಿರದು ಸುತ್ತಲಿನವರನ್ನು ಇರಬಿಡದು.
ವೇಗವಾಗಿ ಓಡುತ್ತಿರುವ ಈ ತಂತ್ರಾಧಾರಿತ ಬದುಕಿನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಚಡಪಡಿಕೆ ಇರುವುದು ಸಾಮಾನ್ಯವೆ. ಆದರೆ ಅತಿಹೆಚ್ಚಿನವರು ಜೀವನಾವಶ್ಯಕಗಳ ಕೊರತೆ ಇಲ್ಲದಿದ್ದರೂ ಸದಾ ಅಸಮಾಧಾನಿಗಳೆ. ಇವರದಂತೂ ಯಾವತ್ತಿಗೂ ಬಗೆಯರಿಯಲಾರದ ವ್ಯರ್ಥ ಪ್ರಲಾಪ. ಈ ವರ್ಗದವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ, ವ್ಯಥೆ. ಇವರೆಲ್ಲರೂ ಏಕಮುಖವಲ್ಲದ ವಿಭಿನ್ನ ವಿಷಯಗಳಿಗಾಗಿ ಕೊರಗುತ್ತಿದ್ದರೂ ಇವರ ಸಾಮಾನ್ಯ ಗುರಿ ಮಾತ್ರ ಒಂದೆಯಾಗಿರುತ್ತದೆ. ಅದೆ ಹೇಗಾದರು ಆಗಲಿ ಶ್ರೀಮಂತನಾಗಬೇಕು. ಶ್ರೀಮಂತ ಎನ್ನುವ ಪದ ನಿಮ್ಮ ಉಚ್ಚಾರಣೆಗೆ ಸ್ವಲ್ಪ ಕಿರಿಕಿರಿಯಾದೀತು ಆದರೂ ಇಲ್ಲಿ ಯಥಾವತ್ತು ಆ ಪದವನ್ನೆ ಬಳಸುವುದು ಅನಿವಾರ್ಯವಾಗಿದೆ. ಏಕೆಂದರೆ ಈಗಾಗಲೆ ಸ್ಥಿತಿವಂತರಾಗಿರುವ ಇವರ ಕಡುಬಯಕೆಗೆ ಮತ್ತೆ ಅದೆ ಪದ ಬಳಸಿದರೆ ಅಷ್ಟೊಂದು ಪರಿಣಾಮ ಕಾಣುವುದಿಲ್ಲ. ಹಾಗಾಗಿ ನೆಮ್ಮದಿಯನ್ನು ಬಲಿಕೊಟ್ಟು ಅಡ್ಡದಾರಿಯಿಡಿದು ಒಡನಾಡಿಗಳನ್ನೆ ಯಾಮಾರಿಸಿ, ಕಸಿದುಕೊಳ್ಳುವ ಹುಚ್ಚಿಡಿಸಿಕೊಂಡು ಓಡುತ್ತಿರವ ಸಮುದಾಯಕ್ಕೆ ಶ್ರೀಮಂತ ಪದವೇ ಸೂಕ್ತ. ಏಕೆಂದರೆ ಈ ದುಷ್ಟ ವರ್ಗಕ್ಕೆ ಶ್ರೀಮಂತಿಕೆಯ ವ್ಯಾಖ್ಯಾನ ತಿಳಿದಿಲ್ಲ.
ಪ್ರಕೃತಿಯ ನಡುವೆ ಮುಕ್ತವಾಗಿ ಹಾಗೂ ಸಹಜವಾಗಿ ಬದುಕುವುದೆ ಶ್ರೀಮಂತಿಕೆ. ಗಿರಿ, ಕಂದರ, ಪೊದೆ,ಮರಗಳ ಅಡ್ಡಗಲಕ್ಕೂ ನಡೆದಾಡುತ್ತ, ಹಳ್ಳ, ಕೊಳ್ಳ, ನದಿಗಳ ನೀರುಂಡು ನಿರುಮ್ಮಳವಾಗಿ ಬದುಕುವ ಪ್ರಾಣಿ, ಪಕ್ಷಿಗಳ ಮುಂದೆ ಮನುಷ್ಯ ಸ್ವಾರ್ಥಿ. ಕೊಟ್ಯಂತರ ಪ್ರಬೇಧಗಳ ಜೀವರಾಶಿಗಳ ನಡುವೆ ಇವನು ಮಾತ್ರ ದುರಾಸೆಯ ದಾಸ. ಇವನು ಯಾವುದರಲ್ಲಿಯೂ ತೃಪ್ತಿಕಾಣದ ಕ್ಷುಲ್ಲಕ ಜೀವಿ.
ಪ್ರಸ್ತುತ ಈ ಕಾಲಘಟ್ಟದಲ್ಲಿ ವಾಸ್ತವಿಕವಾಗಿ ಮನುಷ್ಯ ತಾಂತ್ರಿಕ ಅಪ್ಪುಗೆಯೊಳಗೆ ಯಾಂತ್ರಿಕ ಬುದುಕನ್ನು ಸಾಗಿಸುತ್ತಿದ್ದಾನೆ. ಕಂಡದ್ದೆಲ್ಲ ನನ್ನದಾಗಬೇಕೆಂಬ ದುರ್ಬುದ್ಧಿಯಿಂದ ಜೀವನ ಎಂಬುದನ್ನು ಅವನೆ ಕೆರೆದು ಗಾಯ ಮಾಡಿಕೊಂಡಿದ್ದಾನೆ. ಅವು ಕೀವು,ರಕ್ತಗಳನ್ನು ಸುರಿಸಿ ನೋಯತ್ತಿರುವಾಗ ಕೊರಗಿ ಕಣ್ಣೀರಾಗುತ್ತಿದ್ದಾನೆ. ಅಡ್ಡದಾರಿಯಿಡಿದು ದಾರಿತಪ್ಪಿ ಕೊನೆಯಲ್ಲಿ ಪರರನ್ನು ದೂಷಿಸುತ್ತ ತಾನೆ ಮಾಡಿಕೊಂಡ ಸ್ವಯಂಕೃತ ಎಡವಟ್ಟುಗಳನ್ನು ಸಮರ್ಥಿಸಿಕೊಳ್ಳುವ ಜಾಣತನ ಅವನದು. ಸಂಬಂಧಗಳನ್ನು ದೂರವಿಡುತ್ತಿದ್ದಾನೆ ಅಥವಾ ಅವುಗಳನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಹಣವಂತನಾಗುವ, ಆಸ್ತಿವಂತನಾಗುವ ಹಂಬಲದಲ್ಲಿ ಹೆತ್ತವರನ್ನು ದೂರ ತಳ್ಳುತ್ತಿದ್ದಾನೆ. ಜೊತೆಗುಟ್ಟಿದವರ ಸಂಬಂಧಗಳಂತು ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತಗೊಳಿಸಿಕೊಳ್ಳುತ್ತಿದ್ದಾನೆ. ಇದೆಲ್ಲದರ ಪರಿಣಾಮ ವೈವಿಧ್ಯಮಯ ಜೀವಪರಿಸರದಲ್ಲಿ ಪ್ರಬುದ್ಧ ಜೀವಿಯಾದ ಮನುಷ್ಯನಿಗೆ ಈಗ ಬದುಕಿದೆ ಆದರೆ ಭಾವನೆಗಳ ಬಂಧವಿಲ್ಲ, ಜೀವನವಿದೆ ಆದರೆ ಜೀವಂತಿಕೆ ಇಲ್ಲ.
ಪ್ರೀತಿ, ಸಹಬಾಳ್ವೆ, ಅನ್ಯೋನ್ಯತೆ, ಭ್ರಾತೃತ್ವ, ಸಹಿಷ್ಣುತೆ ಈ ಭಾವನೆಗಳೆಲ್ಲ ಶ್ರೀಮಂತರಾಗಬೇಕೆಂಬ ಹುಚ್ಚಿನಲ್ಲಿ ಕೊಚ್ಚಿಹೋಗಿವೆ. ಅಪರೂಪದ ಜೀವಿಯಾಗಿ ಸಜ್ಜನಿಕೆಯಿಂದ ಸಾರ್ಥಕ ಬದುಕನ್ನು ಅನುಭವಿಸಬೇಕಾದ ಮನುಷ್ಯ ನೆಮ್ಮದಿಯ ಬದುಕಿಗೆ ಅಗತ್ಯವಲ್ಲದ ನಡವಳಿಕೆಗಳ ಹುಚ್ಚು ಬರಿಸಿಕೊಂಡಿದ್ದಾನೆ. ಈ ಹುಚ್ಚು ‘ಹುಚ್ಚು ಬಿಡುವವರೆಗೂ ಮದುವೆಯಾಗಲ್ಲ, ಮದುವೆಯಾಗೊವರೆಗೂ ಹುಚ್ಚು ಹೋಗಲ್ಲ’ ಎನ್ನುವಂತಾಗಿದೆ.
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೆಗೊ ಮಸಣಕೊ ಹೋಗೆಂದಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ.
ಡಿ.ವಿ.ಜಿ.ಯವರ ಈ ಕಗ್ಗದ ಸಾಲು ಎಷ್ಟೊಂದು ಪ್ರಸ್ತುತವಲ್ಲವೇ?. ಹಾಗೆಂದು ನಾನು ಆಧ್ಯಾತ್ಮದ ಮಾತುಗಳನ್ನಾಡುತ್ತಿಲ್ಲ. ಗಳಿಸುವ ಆತುರದಲ್ಲಿ ಬದುಕನ್ನೇ ಯಾತನೆಗೊಡ್ಡುತ್ತಿರುವವರು ಇಂತಹ ಅನುಭವದ ಮಾತಿನಿಂದಾದರೂ ಎಚ್ಚರವಾಗಬೇಕೆಂಬ ಆಶಯದಿಂದಷ್ಟೆ.ಜೀವನಾನಂದ ಅನುಭವಿಸುವುದಕ್ಕಾಗಿ, ಖುಷಿಯಿಂದ ಬದುಕುವುದಕ್ಕಾಗಿ ಮನುಷ್ಯ ತನ್ನ ಮಿತಿಯನ್ನು ಅರಿಯಬೆಕೆಂಬ ಹಂಬಲ ಕಗ್ಗದ ಸಾಲುಗಳಲ್ಲಿದೆ. ಅದನ್ನು ಅರ್ಥೈಸಿಕೊಳ್ಳಬೇಕಷ್ಟೆ.
ಸದಾ ಸಂಕಟ ತೋಡಿಕೊಳ್ಳುವ ಮತ್ತೊಂದು ವರ್ಗದ ಜನರಿದ್ದಾರೆ. ಇವರದು ಮತ್ತೊಂದು ರೀತಿಯ ನರಳಿಕೆ. ಒಳ್ಳೆಯವರಿಗಿದು ಕಾಲವಲ್ಲ ಎಂದು ಎದುರಿಗೆಸಿಕ್ಕವರಿಗೆಲ್ಲ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತ ಹಲುಬುತ್ತಿರುತ್ತಾರೆ. ಇದರಲ್ಲಿ ಕಳ್ಳರು, ಸುಳ್ಳರು, ಮೋಸಗಾರರು, ಕಪಟಿಗಳು ಹೀಗೆ ಎಲ್ಲಾ ನಮೂನೆಯವರು ಸೇರಿದ್ದಾರೆ. ಹಾಗಾದರೆ
ಕೆಟ್ಟವರು ಯಾರು………..!?. ಹುಡುಕುವುದೀಗ
ಬಲು ಕಷ್ಟ, ಸಮಯವೂ ನಷ್ಟ.ನಾವಷ್ಟೆ ಒಳ್ಳೆಯವರು ಎಂದು ಹೇಳಿಕೊಳ್ಳುವವರು ಕೂಡ ಶಾಂತವಾಗಿ, ತಿಳಿಯಾಗಿರುವ ನೀರಿಗೆ ಕಲ್ಲು ಹಾಕಿರುವುದನ್ನು ಮುಚ್ಚಿಡುತ್ತಾರೆ. ಹಾಗೆಂದು ಇವರೆಲ್ಲರೂ ಸುಳ್ಳನ್ನೆ ಹೇಳುತ್ತಿದ್ದಾರೆ ಎನ್ನುವುದು ನನ್ನ ಅಭಿಮತವಲ್ಲ ಇದರಲ್ಲಿ ನಿಜ ಹೇಳುವವರ ಪ್ರಮಾಣ ತೀರಾ ಕಡಿಮೆ.
ಇರುವುದನ್ನ ಇದ್ದಂತೆ ನೋಡುವ, ಅನುಭವಿಸುವ, ಅದರಷ್ಟಕ್ಕದನ್ನು ಬಿಡುವ ಮನಸ್ಥಿತಿ ಅತಿ ಹೆಚ್ಚಿನ ಜನರಿಗಿಲ್ಲ. ಮಣ್ಣಾಗಲಿ, ಕಲ್ಲಾಗಲಿ, ಮರಗಿಡಗಳಾಗಲಿ, ನೀರಾಗಲಿ, ನೆಲವಾಗಲಿ, ಸ್ವಂತದ್ದಾಗಲಿ, ಪರರದ್ದಾಗಲಿ ಒಟ್ಟಾರೆ ಅದರಲ್ಲಿ ಮೂಗುತೂರಿಸಬೇಕು. ಲಾಭಪಡೆಯಬೇಕು ಅಥವಾ ವಿಚಲಿತಗೊಳಿಸಿದ್ದಕ್ಕಾದರೂ ಖುಷಿಪಡಬೇಕು. ಇದು ಸತ್ಯವಾದರೂ ಪ್ರತಿಯೊಬ್ಬರದು ಒಂದೇ ಧ್ವನಿ. ‘ನಮ್ಮದು ಸಭ್ಯ ಮನೆತನ, ನಾವು ಅಂತವರಲ್ಲ’ ಹಾಗಿದ್ದರೆ ಎಲ್ಲಾ ಒಳ್ಳೆಯವರೆ ಆಗಿರುವಾಗ ಈ ರೀತಿ ವಿಕೃತ ಆನಂದ ಪಡುವವರು ಯಾರು?. ಇದು ಮನೆಮನೆಯ, ವ್ಯಕ್ತಿವ್ಯಕ್ತಿಯ ಕತೆ. ಹೀಗಿದ್ದರೆ ಕೆಟ್ಟವರು ಎಲ್ಲಿದ್ದಾರು….?.
ನನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಕೆಟ್ಟವರೆಂದೆ ಭಾವಿಸುತ್ತೇವೆ, ಭ್ರಮಿಸುತ್ತೇವೆ. ವಾಸ್ತವದಲ್ಲಿ ತನ್ನಂತೆ ಪರರ ಬಗೆಯುವುದಿಲ್ಲ. ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಪ್ರತಿಯೊಂದು ಗೋಚರಿಸುತ್ತದೆ ಎನ್ನುವ ಅರಿವು ನಮ್ಮೊಳಗೆ ಬತ್ತಿಹೋಗಿದೆ. ಕಣ್ಣತುಂಬ ಹಳದಿಯೇ ತುಂಬಿರುವಾಗ ಲೋಕವು ಹಾಗೆಯೇ ಕಾಣುವುದು ಸಹಜವಲ್ಲವೆ. ಒಮ್ಮೆ ಇದಕ್ಕೆ ತದ್ವಿರುದ್ದವಾಗಿ ಯೋಚಿಸಿ ನೋಡಿ ಎಲ್ಲವೂ,ಎಲ್ಲರೂ ಚಂದಚಂದ. ಈ ಚಂದವನ್ನು ಕಾಣುವ ಕಣ್ಣಿರಬೇಕು,ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿರಬೇಕಷ್ಟೆ.
