ವಿವೇಕ ಕೆ.ವಿ.
ಕನಸಲ್ಲೂ ಕಾಡುವ ಕೆಲಸಗಳು. ಸೂರ್ಯನೊಂದಿಗೆ ನಿರಂತರ ಪೈಪೋಟಿಗೆ ಬಿದ್ದವಳಂತೆ ಏಳುತ್ತಾಳೆ. ಕಸ ಗುಡಿಸುತ್ತಾಳೆ ಪದ ಗುನುಗುತ್ತಾ ರಂಗವಲ್ಲಿ ಇಕ್ಕುತ್ತಾಳೆ. ನಿರಂತರ ನೋವಿನೊಂದಿಗೆ ಜೊತೆಯಾಗುವವಳು ನೀನೊಬ್ಬಳೇ ಎಂದು ರಂಗವಲ್ಲಿಯನ್ನು ಮಾತನಾಡಿಸುತ್ತಾಳೆ. ಇಟ್ಟ ರಂಗವಲ್ಲಿಯ ಅಂದ ನೋಡಿ ನಸುನಗುತ್ತಾಳೆ. ಹಿತ್ತಲ ಗಿಡಗಳನ್ನು ನೋಡುತ್ತಾ ನೀರೆರೆಯುತ್ತಾಳೆ.”ಯಾಕೆ ಹೀಗೆ ಸೊರಗಿದ್ದೀಯ ನಮ್ಮವ್ವ” ಎನ್ನುತ್ತಾ ಬುಡ ಕುಕ್ಕಿ, ಸೆತ್ತೆ ಕೀಳುತ್ತಾಳೆ.ಹೂಗಳ ಚಂದಕ್ಕೆ ಮನಸೋಲುತ್ತಾಳೆ. ಮೌನದ ಮಾತಿಗೆ ದನಿಯಾಗುತ್ತಾಳೆ. ಪರಿವೆಯೇ ಇಲ್ಲದೆ ಪರಿಮಳ ಹರಡುವ ಪರಿಗೆ ಬೆರಗಾಗುತ್ತಾಳೆ.ಎಲ್ಲವನ್ನು ಮರೆಸುವ ಜಾದೂಗಾರರು ನೀವು ಎನ್ನುತ್ತಾ ಕೊಟ್ಟಿಗೆಗೆ ಓಡುತ್ತಾಳೆ. ದನ ಕರುಗಳ ಮೈಸವರಿ, ಸಗಣಿ ಬಳಿದು, ಗಂಜಲ ಬಾಚಿ, ಹಾಲು ಕರೆಯುತ್ತಾಳೆ. ಕರೆದ ಹಾಲ ಕಣ್ಣಿಗೊತ್ತಿ ಸಂತತಿ ನೂರಾಗಲೆಂದು ಹರಸುತ್ತಾಳೆ.ಕರುವನ್ನು ನೋಡಿ ಮರುಕ ಪಡುತ್ತಾಳೆ. “ಬೈಕೋ ಬೇಡ ಮಗ ನಿನ್ ಹಾಲ್ನೆಲ್ಲ ಕಿತ್ಕೊಂಡೆ ಅಂತ”. ಎಂದು ಕರವನ್ನು ಮಾತನಾಡಿಸುತ್ತಲೇ ಅಡಿಗೆ ಮನೆಗೆ ಓಡುತ್ತಾಳೆ. ಒಲೆಯ ಮೇಲೆ ಕಾಫಿಗೆ ಇಡುತ್ತಾ…ಮಕ್ಕಳನ್ನು ಏಳಿಸಬೇಕು, ಈ ದಿನ ಶಾಲೆಗೆ ಇವನಿಗೆ ಯಾವ ಬಟ್ಟೆ…? ಅವಳು ಪರೀಕ್ಷೆ ಅಂತಿದ್ಲು. ಇವನಿಗೆ ಹೇಳಬೇಕು ಡೈರಿಗೆ ಹಾಲು ಹಾಕಿ, ವಾರದ ಹಣ ಇಸ್ಕೊಂಡ್ ಬರಕ್ಕೆ. ಇವನು ಈ ತಿಂಗಳೇ ಪರೀಕ್ಷೆ ಪೀಸು ಕಟ್ಟಬೇಕು ಅಂತಿದ್ದ. ಅವಳು ಮುಂದಿನ ವರ್ಷ ಕಾಲೇಜು ಸೇರುತ್ತಾಳೆ. ಚೆನ್ನಾಗಿ ಓದಿಸಬೇಕು. ನನ್ನಂತಾಗಬಾರದು. ಅವಳ ಚಪ್ಪಲಿ ಹರಿದಿವೆ. ಇವನಿಗೆ ಎರಡು ಚಡ್ಡಿ ತರಬೇಕು. ಸೋಸಿದ ಕಾಫಿಯನ್ನು ವಯಸ್ಸಾದ ಅತ್ತೆ ಮಾವಂದಿರಿಗೆ ಕೊಡುತ್ತಾಳೆ.ಬೀಡಿ ಸೇದುತ್ತಾ ಕುಳಿತಿದ್ದ ಗಂಡನಿಗೆ ಕೊಡುತ್ತಾಳೆ.” ಇವತ್ತಾರ ಕೂಲಿಯಾ ನೆಟ್ಟಗೆ ಮನೆಗೆ ತಕಂಬಾ. ಓದೊ ಮಕ್ಕಳು ಖರ್ಚು ಜಾಸ್ತಿ ನಾನು ಎಷ್ಟಂತ ನಿಭಾಯಿಸನ”… ಎನ್ನುತ್ತಾ ಮಕ್ಕಳನ್ನು ಏಳಿಸುವಳು. ಅವರಿಗೊಂದೊಂದು ಕೆಲಸ ಹಚ್ಚಿ, ಕಾಯಿ ಒಡೆದು ಚಟ್ನಿ ಅರೆಯುವಳು. ಹಿಟ್ಟು ಕಲೆಸಿ ರೊಟ್ಟಿ ಬಡಿಯುವಳು. ಮಕ್ಕಳಿಗೆ ಬೆನ್ನುಜ್ಜಿ ನೀರುಯ್ಯುವಳು. ಮಗಳಿಗೆ ಬೈತಲೆ ತೆಗೆದು ಜಡೆ ಕಟ್ಟುವಳು.ಶಾಲೆಗೆ ತಯಾರಾಗಲು ಹೇಳುತ್ತಲೇ ಪಾತ್ರೆ ತೊಳೆಯುವಳು. ಕಸ ಗುಡಿಸುವಳು. ಗೂಡಿನಲ್ಲಿನ ದೇವರಿಗೊಂದು ದೀಪ ಹಚ್ಚಿ ಹೂ ಮುಡಿಸುವಳು. ಮಂತ್ರಗಳ ಹಂಗು ತೊರೆದು ಸುಮ್ಮನೇ ನಮಿಸುವಳು. ಎಲ್ಲರಿಗೂ ತಿಂಡಿ ಕೊಟ್ಟು ತಾನು ತಿನ್ನುವಳು. ತಿನ್ನುತ್ತಲೇ ಎಲ್ಲರಿಗೂ ದಿನದ ಕೆಲಸ ಹಂಚುವಳು. ಅವರ ಜವಾಬ್ದಾರಿ ನೆನಪಿಸುವಳು. ಶಾಲೆಗೆ ತಯಾರಾಗಿ ನಿಂತ ಮಕ್ಕಳನ್ನು ನೋಡಿ ಕಣ್ತುಂಬಿಕೊಳ್ಳುವಳು. ದೃಷ್ಟಿ ತೆಗೆದು ನೆಟ್ಟಿಗೆ ಮುರಿಯುವಳು.ದನಕರುಗಳೊಟ್ಟಿಗೆ ಹೊಲದ ಕಡೆಗೆ ಓಡುವಳು. ಅವುಗಳ ಮೇವು ನೀರು ನೋಡುವಳು. ಹೊಲವೆಲ್ಲ ಸುತ್ತಿ ನೀರು ಗೊಬ್ಬರದ ನಿಗಾ ಮಾಡುವಳು. “ಕೈ ಬಿಡಬೇಡ ಕಣವ್ವ “ಎನ್ನುತ್ತಾ ಭೂಮಿ ತಾಯಿಗೆ ನಮಿಸುವಳು.ಕಾಳು, ಕಡ್ಡಿ ,ಸೊಪ್ಪು, ಸೌದೆಗಳನ್ನು ಒಟ್ಟು ಮಾಡುವಳು. ಹೊರೆ ಹೊತ್ತು, ಮನೆ ತಲುಪಿ ಸಾರು ಕುದಿಸಿ, ಮುದ್ದೆ ಕಟ್ಟುವಳು. ಗಂಡನಿಗೆ ಬುತ್ತಿ ಹೊತ್ತು ಮರಳಿ ಹೊಲ ಸೇರುವಳು.ನಮ್ಮ ಬವಣೆಗೆ ನಿಮ್ಮನ್ನು ಮಾರಬೇಕು ಎನ್ನುತ್ತಾ ಮೊಗ್ಗು ಬಿಡಿಸುವಳು. ಈ ತಿಂಗಳ ಆದಾಯ ಖರ್ಚುಗಳನ್ನು ಮನದಲ್ಲೇ ಲೆಕ್ಕ ಹಾಕುವಳು. ಆದಾಯಕ್ಕಿಂತ ಖರ್ಚೆ ಹೆಚ್ಚು. ಲೆಕ್ಕ ಹಾಕಿ ಸೋಲುವಳು. ಸಂತೆಗೆ ದುಡ್ಡು ಹೊಂಚಬೇಕು. ಇವನನ್ನು ಕಳಿಸಿದರೆ ಅರ್ಧ ದುಡ್ಡು ಕುಡಿದೇ ಹಾಳು ಮಾಡುತ್ತಾನೆ. ಹುಲ್ಲು ಹೊತ್ತು, ಮೊಗ್ಗಿನ ಚೀಲ ಹಿಡಿದು ದನಕರ ಹೊಡೆದುಕೊಂಡು ಮನೆ ಸೇರುವಳು. ಬೆಳಗಿನ ತಿಂಡಿಗೇನು…? ಸಾರಿಗೇನು…? ಮಂಕರಿ ತುಂಬಿದ ಕೊಳೆ ಬಟ್ಟೆಗಳು ಅಣಕಿಸಿದವು. ಮೊಗ್ಗು ಕಟ್ಟುತ್ತಲೆ ಯೋಚಿಸುವಳು. ಕಟ್ಟಿದ ಮೊಗ್ಗನ್ನು ಆಚೆ ಮನೆಯ ಅಕ್ಕನಿಗೆ ತಲುಪಿಸುವಳು. ಅವಳು ಕೊಟ್ಟ ತಂಬಿಟ್ಟಿನ ಉಂಡೆಗಳನ್ನು ಸೆರೆಗಿನಲಿ ಗಂಟಿಕ್ಕಿ ತಂದು ಮಕ್ಕಳಿಗೆ ನೀಡುವಳು. ಸಾರಿಗೆ ಎಂದು ಬಂದ ಈಚೆ ಮನೆಯ ಅಕ್ಕನಿಗೆ ಸಾರಿನೊಂದಿಗೆ ತಾನೇ ಬೆಳೆದ ಸೊಪ್ಪನ್ನೂ ನೀಡಿ ಹಂಚಿ ಉಣ್ಣುವ ತತ್ವ ಸಾರುವಳು..ಶಾಲೆಯಿಂದ ಬಂದ ಮಕ್ಕಳ ಮಾತಿಗೆ ಕಿವಿಯಾಗುವಳು. ದನಿಯಾಗುವಳು. ತಲೆಗೆ ಎಣ್ಣೆ ತಟ್ಟುತ್ತಾ ತಿಳಿ ಹೇಳುವಳು.ತನಗೆ ತಿಳಿಯದ ಓದನ್ನು ಓದಲು ತಿಳಿಸುವಳು. ಚಂದಮಾಮನನ್ನು ತೋರಿಸಿ, ತುತ್ತ ನಿಕ್ಕಿ ಹಸಿವ ತಣಿಸುವಳು. ಲಾಲಿ ಹಾಡಿ ತಟ್ಟಿ ಮಲಗಿಸಿ ನಿದ್ರಾ ದೇವಿಯ ಮಡಿಲ ಸೇರಿಸುವಳು.ಚಂದ್ರ ನಕ್ಷತ್ರಗಳನ್ನು ನೋಡುತ್ತಾ ಕಾಲದ ಮಿತಿಗೆ ಒಳಪಟ್ಟು, ಕಾಲವನ್ನೂ ದಾಟುವಳು. ಮಗಳಿಗೊಂದು ಒಳ್ಳೆಯ ಹುಡುಗ ಮಗನಿಗೊಂದು ಒಳ್ಳೆಯ ಹುಡುಗಿ… ಕನಸು ಕಾಣುವಳು. ಮಕ್ಕಳು ಮೊಮ್ಮಕ್ಕಳ ಬೀಜ ಬಿತ್ತುವಳು.ಬಂದಂತೆ ಬದುಕ ಸ್ವೀಕರಿಸುವ ಮರದಂತವಳು. “ಸಂವಿಧಾನ” ಪದವೇ ಕೇಳದೆ ಬದುಕುವ ವಿಧಾನ ತಿಳಿದವಳು. ಇವಳು ಲೋಕವನ್ನು ಬಲ್ಲವಳಲ್ಲ ಆದರೆ ಗಂಡ ಮನೆ ಮಕ್ಕಳಲ್ಲೆ ಲೋಕವನ್ನು ಕಂಡವಳು.ದೇಶ ವಿದೇಶಗಳನ್ನು ಸುತ್ತಿದವಳಲ್ಲ ಹೊಲ ಮನೆಯ ದಾರಿ ಸವೆಸಿದವಳು. ಖಗ್ಗ ದರ್ಶನ ಗಳನ್ನು ಓದಿದವಳಲ್ಲ ಜೀವನ ದರ್ಶನ ಪಡೆದವಳು.ಇವಳು ತರಬೇತಿ ಪಡೆಯದ ಕಲಾವಿದೆ. ಗಣಿತವನ್ನೇ ತಿಳಿಯದ ಅರ್ಥಶಾಸ್ತ್ರಜ್ಞೆ. ಏನನ್ನು ಶೋಧಿಸದ ಗೃಹ ವಿಜ್ಞಾನಿ. ಪಲಾಯನದ ಅರಿವೇ ಇಲ್ಲದ ಕಾಯಕ ಜೀವಿ. ತತ್ವ ಸಿದ್ಧಾಂತ ಮತ ಪಂಥಗಳ ತಿಳಿವು ಮೀರಿದ ತತ್ವಜ್ಞಾನಿ. ಹಿಮಾಲಯದ ಹೆಸರನ್ನೇ ಕೇಳದ ನಿಜ ತಪಸ್ವಿನಿ….!ಬಿಟ್ಟೆನೆಂದರೂ ಬಿಡದ ಈ ಜಗದ ಮಾಯೆ…! ನಮ್ಮೆಲ್ಲರ ಅಮ್ಮ .ನಿನಗಿದೋ ನಮ್ಮ ನಮನ.
