ಬೆಂಗಳೂರು ನಗರದ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನೀಡುತ್ತಿರುವ ರಾಜ್ಯ ಮಟ್ಟದ “ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ 3 ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಶ್ರೀ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್, ಚಲನಚಿತ್ರ ಹಾಸ್ಯ ನಟರಾದ ಶ್ರೀ ಶಿವರಾಜ್ ಕೆ.ಆರ್. ಪೇಟೆ ರವರು ೨೦೨೬ರ “ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಸಮಾರಂಭವು ಇದೇ ತಿಂಗಳ 29ರಂದು ಭಾನುವಾರ ಸಂಜೆ ೪-೦೦ ಗಂಟೆಗೆ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದ್ದು, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟನೆ ಮಾಡುವರು, ಪ್ರಸಿದ್ಧ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ರವರು ಪ್ರಶಸ್ತಿ ಪ್ರದಾನ ಮಾಡುವರು, ಸಂಸ್ಕೃತಿ ಚಿಂತಕರು ಹಾಗೂ ಪೊಲೀಸ್ ಉಪ ಮಹಾನಿರೀಕ್ಷಕರಾದ ಡಾ. ಎ.ಎನ್. ಪ್ರಕಾಶ್ ಗೌಡ ಐಪಿಎಸ್ ರವರು ಅಧ್ಯಕ್ಷತೆ ವಹಿಸುವರು. ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಟ್ರಸ್ಟ್ ನ ಅಧ್ಯಕ್ಷರಾದ ರಘುನಂದನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ ಆಯ್ಕೆಯಾದ ಸಾಧಕರ ಕಿರು ಪರಿಚಯವನ್ನು ʼಸುದ್ದಿಸಂಗಾತಿ ಧ್ವನಿʼ ತನ್ನ ಓದುಗರಿಗಾಗಿ ಇಲ್ಲಿ ದಾಖಲಿಸಿದೆ.
ಎಸ್. ದಿವಾಕರ್:
ಸಾಹಿತ್ಯ ಕ್ಷೇತ್ರದ ಧ್ರುವತಾರೆ ಎಸ್. ದಿವಾಕರ್‌ರವರು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ ೧೯೪೪ರಲ್ಲಿ ಜನಿಸಿದರು. ದೇವನಹಳ್ಳಿ ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದರು. ವೃತ್ತಿಯಿಂದ ಪತ್ರಕರ್ತರಾದ ಇವರು ಸಂಯುಕ್ತ ಕರ್ನಾಟಕ, ಮಲ್ಲಿಗೆ, ಸುಧಾ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಮುಂತಾದ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೯ ರಿಂದ ೨೦೦೫ ರವರೆಗೆ ಚೆನ್ನೆöÊನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ನಲ್ಲ್ಲಿ ಸಂಪಾದಕರಾಗಿ ಹೆಸರು ಮಾಡಿದರು. ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆಯ ಸಾಹಿತ್ಯ ಸಲಹೆಗಾರರಾಗಿ ದೇಶವಿದೇಶಗಳ ಸಾಧಕರನ್ನು ಕುರಿತ ನೂರಾರು ಪುಸ್ತಕಗಳನ್ನು ಪ್ರಕಟಿಸಲು ನೆರವಾದರು. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಸಂಪಾದನೆ, ಅಂಕಣ ಬರಹ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ೩೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆತ್ಮಚರಿತ್ರೆಯ ಕೊನೆಯ ಪುಟ, ನಾಪತ್ತೆಯಾದ ಗ್ರಾಮ ಫೋನು, ಶಾಂತಿಯ ಭಾಷೆ, ಪ್ರಪಂಚ ಪುಸ್ತಕ, ಸ್ವಯಂ ದೀಪಕತೆ, ಜಗತ್ತಿನ ಅತಿಸಣ್ಣ ಕಥೆಗಳು, ಈ ಊರಿನಲ್ಲಿ ಕಳ್ಳರೇ ಇಲ್ಲ, ಶತಮಾನದ ಸಣ್ಣ ಕಥೆಗಳು, ಬೆಸ್ಟ್ ಆಫ್ ಕೇಫ್, ಪಂಡಿತ್ ಭೀಮಸೇನ ಜೋಶಿ, ಒಂದೊAದು ನೆನಪಿಗೂ ಒಂದೊAದು ವಾಸನೆ, ಹಾರಿಕೊಂಡು ಹೋದವನು – ಇವರ ಪ್ರಮುಖ ಕೃತಿಗಳು. ದಿವಾಕರ್ ಅವರ ಅನೇಕ ಸಣ್ಣ ಕಥೆಗಳು ಮತ್ತು ಕವನಗಳು ತಮಿಳು, ಹಿಂದಿ, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ಗಾಗಿ ಬರೆÀದ ‘ಸಮೂಹ ಮಾಧ್ಯಮಗಳು’ ಪುಸ್ತಕ ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊAಡಿದೆ. ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಸಂದಿವೆ. ಶ್ರೀಯುತರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ೨೦೨೬ನೇ ಸಾಲಿನ ‘ಹಸಿರು ಸಿರಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ.
ಜೀವನ್ಮುಖಿ ಸುರೇಶ್:
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಕೃಷಿಕ ಕುಟುಂಬದ ಎಂ.ಜೆ. ತಿಮ್ಮೇಗೌಡ ಮತ್ತು ಶ್ರೀಮತಿ ಮಂಚಮ್ಮ ಅವರ ಸುಪುತ್ರರಾದ ಟಿ. ಸುರೇಶ್ ೧೯೭೬ ರಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ ವೃತ್ತಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದರು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಆಸಕ್ತರಾಗಿದ್ದ ಟಿ. ಸುರೇಶ್ ಅವರು ಬರಹಗಾರ ಮತ್ತು ಸಿನಿಮಾ ಹಂಚಿಕೆದಾರರಾಗಿ ತೊಡಗಿಸಿಕೊಂಡಿದ್ದರು. ನಿಧಾನವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ಸಂಪೂರ್ಣ ಸಮಯ ವಿನಿಯೋಗಿಸಿದ ಸುರೇಶ್ ಸದಾ ಹಸನ್ಮುಖಿ ಭಾವ ಮತ್ತು ಮಾನವೀಯ ಗುಣಗಳಿಂದಲೇ ಸಾರ್ವಜನಿಕವಾಗಿ ಪರಿಚಿತರಾದರು. ಈ ಕಾರಣದಿಂದಲೇ ಅವರಿಗೆ ‘ಜೀವನ್ಮುಖಿ ಸುರೇಶ್’ ಎಂಬ ಹೆಸರು ನೆಲೆಯಾಯಿತು. ಒಪ್ಪಿಕೊಂಡ ಕೆಲಸಗಳನ್ನು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಮಾಡುವ ಅವರ ಗುಣವೇ ಎಲ್ಲರಿಗೂ ಅಚ್ಚುಮೆಚ್ಚು. ತನ್ನ ಬರವಣಿಗೆ ಮತ್ತು ಪತ್ರಿಕೋದ್ಯಮದೆಡೆಗಿನ ತುಡಿತವೇ ೧೬ ವರ್ಷಗಳ ಹಿಂದೆ ಜೀವನ್ಮುಖಿ ಪತ್ರಿಕೆಯ ಉಗಮಕ್ಕೆ ಕಾರಣವಾಯಿತು. ರಾಜಕೀಯ, ಗಾಸಿಪ್, ಸುಳ್ಳು ಸುದ್ದಿಗಳಿಂದ ಮುಕ್ತವಾದ ಮತ್ತು ಸಂಪೂರ್ಣ ಸಾಹಿತ್ಯ ಪತ್ರಿಕೆಯಾಗಿ ಜೀವನ್ಮುಖಿ ನೆಲೆಗೊಂಡಿದೆ. ನಾಡಿನ ಪ್ರಮುಖ ಸಾಹಿತಿಗಳು, ಗಣ್ಯರು, ಹಿರಿಯ ಅಧಿಕಾರಿಗಳು, ಹೊಸ ಬರಹಗಾರರಿಗೆ ವೇದಿಕೆಯಾಗಿರುವ
ಸದಭಿರುಚಿಯ ಪತ್ರಿಕೆಯು ಜನ ಸಾಮಾನ್ಯರಿಂದ ಹಿಡಿದು ಗಣ್ಯರವರೆಗೂ ತಲುಪುತ್ತಿರುವುದು ಹೆಗ್ಗಳಿಕೆ. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಿ ನಾಡಿನ ಸಾಧಕರು, ಚಿಂತಕರು, ಕಲಾವಿದರಿಗೆ ಗೌರವ ನೀಡಲಾಗುತ್ತಿದೆ. ವಾರ್ಷಿಕವಾಗಿ ಕನ್ನಡ ನುಡಿ ಸಮ್ಮೇಳನ ನಡೆಯುವುದು ಇಲ್ಲಿ ಉಲ್ಲೇಖಾರ್ಹವಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಜಾಗೃತ ದಳ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನಾ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿದ್ದಾರೆ. ಇವರ ಸಾಧನೆಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ, ಡಾ. ರಾಜಕುಮಾರ್ ಪ್ರಶಸ್ತಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಸಮಾಜಸೇವಾ ಪ್ರಶಸ್ತಿ, ಡಾ. ಶಿವರಾಮ ಕಾರಂತ ಮಾಧ್ಯಮ ಪ್ರಶಸ್ತಿ, ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. ಶ್ರೀಯುತರ ಸಂಘಟನೆ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ೨೦೨೬ನೇ ಸಾಲಿನ ‘ಹಸಿರು ಸಿರಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ.
ಶಿವರಾಜ್ ಕೆ.ಆರ್. ಪೇಟೆ: 
ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವರಾಜ್ ಕೆ.ಆರ್. ಪೇಟೆ ಅವರು ಅಪ್ಪಟ ಗ್ರಾಮೀಣ ಪ್ರತಿಭೆ. ಶ್ರೀಮತಿ ಶಾರದಾ ಸಾವಿತ್ರಮ್ಮ ಮತ್ತು ರಾಮೇಗೌಡ ದಂಪತಿಗಳ ಏಳು ಜನ ಮಕ್ಕಳಲ್ಲಿ ಶಿವರಾಜ್‌ರವರೇ ಕಿರಿಯರು. ತಂದೆ ನಾಟಕದ ಮೇಷ್ಟುç. ತಂದೆ ಮಾರ್ಗದರ್ಶನದಲ್ಲಿ ಚಿಕ್ಕವರಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕಾಲೇಜು ದಿನಗಳಲ್ಲಿ ಮಿಮಿಕ್ರಿ, ನೃತ್ಯ ಕಾರ್ಯಕ್ರಮ ಕೊಡುತ್ತಿದ್ದರು. ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಪ್ರಮುಖ ಹಾಸ್ಯನಟರಾಗಿ ಹೆಸರು ಮಾಡುತ್ತಿದ್ದಾರೆ. ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಗೆಲ್ಲುವುದರ ಮೂಲಕ ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಕರ್ನಾಟಕದ ಮನೆಮಾತಾಗಿದ್ದಾರೆ. ತಮ್ಮ ಮೊನಚಾದ ಹಾಸ್ಯ ಪ್ರವೃತ್ತಿಯಿಂದ ಅಭಿನಯಿಸಿ ನಟರಾಗಿ ಗುರುತಿಸಿಕೊಂಡಿದ್ದಾರೆ. ನಂತರ ಬೆಂಗಳೂರಿಗೆ ಬಂದು ನಾಟಕಗಳಲ್ಲಿ ಅಭಿನಯಿಸುತ್ತಾ ಜೀವನ ಸಾಗಿಸುತ್ತಿದ್ದರು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಅದೃಷ್ಟದ ಬಾಗಿಲು ತೆರೆಯಿತು. ನಾನು ಮತ್ತು ಗುಂಡ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಶ್ರೀಮತಿ ಶೃತಿ ಮತ್ತು ಶಿವರಾಜ್ ರವರಿಗೆ ವಂಶಿಕ್ ಗೌಡ ಹಾಗೂ ಸಮರ್ಥ್ ಎಂಬ ಇಬ್ಬರು ಪುತ್ರರಿದ್ದಾರೆ. ನಾಡಿನಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದಾರೆ. ಶ್ರೀಯುತರ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ೨೦೨೬ನೇ ಸಾಲಿನ ‘ಹಸಿರು ಸಿರಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ



ಸುದ್ದಿ ಸಂಗಾತಿ ದ್ವನಿ ಪತ್ರಿಕೆ ಬಹಳ ಸೊಗಸಾಗಿ ಮೂಡಿಬಂದಿದೆ,ಇದೇ ರೀತಿ ಮುಂದುವರಿಯಲಿ ಸರ್