ಇಲ್ಲಿನ ಕೋಟೆಯ ಎರೆಡು ಕಡೆಗಳಲ್ಲಿ ಭತ್ತದ ಗದ್ದೆಗಳು ಸುಂದರವಾಗಿ ಕಾಣುತ್ತವೆ. ಸಣ್ಣದಾದ ಮಣ್ಣಿನ ಹಾದಿಯು ನಿಮಗೆ ಅದ್ಬುತವಾದ ಕೋಟೆಗೆ ಕರೆದೊಯ್ಯುತ್ತದೆ. ಅದರಲ್ಲೂ ಬೃಹತ್ ಬಂಡೆಯ ಮೇಲೆ ನಿರ್ಮಾಣವಾಗಿರುವ ದೇವಾಲಯ ಆಸ್ತಿಕರನ್ನು ಕೈಬೀಸಿ ಕರೆಯುವಂತಿದೆ. ಈ ಎಲ್ಲಾ ನೋಟಗಳು ನಿಮ್ಮದಾಗಬೇಕಾದರೆ ಖಂಡಿತಾ ನೀವು ಕಾನನದ ನಡುವೆ ಪ್ರಕೃತಿಯೇ ನಿರ್ಮಿಸಿದಂತಿರುವ ಕವಲೇದುರ್ಗಕ್ಕೆ ಭೇಟಿ ನೀಡಲೇಬೇಕು.
ನಿಜಕ್ಕೂ ಈ ತಾಣ ಸುಂದರ ಮತ್ತು ತಂಪಾದ ವಾತಾವರಣದಿಂದ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಸುತ್ತಮುತ್ತ ಹಚ್ಚ ಹಸಿರಿನ ಕಾನನದ ನಡುವೆ ಕವಲೇದುರ್ಗ ಕಂಗೊಳಿಸುತ್ತದೆ. ಜೊತೆಗೆ ದುರ್ಗದ ಇತಿಹಾಸವನ್ನು ಸಾರಿ ಹೇಳುತ್ತದೆ. ಅಷ್ಟೇ ಅಲ್ಲ, ಮಹಾಭಾರತದ ಕಥೆಯನ್ನೂ ಸಹ ತನ್ನೊಡಲಲ್ಲಿ ಇಟ್ಟುಕೊಂಡಿದೆ.
ಬಹಳ ಪ್ರಾಚೀನವಾದ ಕವಲೇದುರ್ಗದ ಕೋಟೆಯು ರಾಜ್ಯದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಸುಂದರ ತಾಣವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಕವಲೇದುರ್ಗ ಪ್ರಾಕೃತಿಕ ಸೌಂದರ್ಯದ ಅದ್ಬುತ ಪ್ರವಾಸಿ ಸ್ಥಳವಾಗಿದೆ.
ಈ ಬೆಟ್ಟದ ತುದಿಯನ್ನು ಪ್ರವಾಸಿಗರು ತಲುಪಲು ಸುಮಾರು ಐದು ಕಿಲೋ ಮೀಟರ್ ದೂರ ಕ್ರಮಿಸಬೇಕು. ಪಶ್ಚಿಮ ಘಟ್ಟಗಳ ಬಳಿ ಇರುವ ಈ ತಾಣ ನೋಡಲು ಬಹಳ ಸುಂದರವಾಗಿದ್ದು, ಪ್ರವಾಸಿಗರ ಮನಸೊರೆಗೊಳ್ಳುತ್ತದೆ. ಈ ದುರ್ಗದಲ್ಲಿ ಹಳೆಯ ಕೋಟೆಕೊತ್ತಲಗಳ ಜೊತೆಗೆ ಅರಮನೆಯನ್ನು ಸಹ ನೋಡಬಹುದು. ಅಲ್ಲದೇ, ಇಲ್ಲಿ ಹಲವು ದೇವರುಗಳ ದರ್ಶನ ಮಾಡಬಹುದಾಗಿದೆ.
ಕವಲೇದುರ್ಗ ಒಂದು ಬೆಟ್ಟದ ಮೇಲಿರುವ ಕೋಟೆಯ ಪ್ರದೇಶವಾಗಿದ್ದು, ತನ್ನ ಸುತ್ತಮುತ್ತ ಆಕರ್ಷಕವಾದ ಪ್ರಕೃತಿ ಸೊಬಗನ್ನು ಹೊಂದಿದೆ. ಇದಲ್ಲದೇ, ತನ್ನ ಐತಿಹಾಸಿಕ ರಚನೆಗಳಿಂದ ಪ್ರವಾಸಿಗರಲ್ಲಿ ಕೂತೂಹಲ ಮೂಡಿಸುತ್ತದೆ. ಕವಲೇದುರ್ಗವು ಚಾರಣ ಪ್ರಿಯರಿಗೆ ಅಚ್ಚು ಮೆಚ್ಚಿನ ಸ್ಥಳವಾಗಿದ್ದು, ಸ್ಥಳೀಯರ ಮಾರ್ಗದರ್ಶನದಲ್ಲಿ ಚಾರಣ ಮಾಡಿದರೆ ಸೊಗಸಾದ ಅನುಭವ ನಿಮ್ಮದಾಗುವಲ್ಲಿ ಯಾವುದೇ ಅನುಮಾನವಿಲ್ಲ.
ಕವಲೇದುರ್ಗದ ಇತಿಹಾಸದ ಮೆಲುಕು…
ಹಲವು ದೇವಾಲಯಗಳನ್ನು ಹೊಂದಿರುವ ಕೋಟೆಗಳನ್ನು ಇಲ್ಲಿ ನಾವು ನೋಡಬಹುದು. ಇಲ್ಲಿರುವ ಮೂಲ ಕೋಟೆಯನ್ನು ೯ನೇ ಶತಮಾನದಲ್ಲಿ ಬೆಳಗುತ್ತಿ ಅರಸ ಚೆಲುವರಂಗಪ್ಪ ನವೀಕರಿಸಿದರು. ೧೬ನೇ ಶತಮಾನದಲ್ಲಿ ಕೆಳದಿಯ ರಾಜ ಹಿರಿಯ ವೆಂಕಟಪ್ಪ ನಾಯಕನು ಕೋಟೆಯನ್ನು ರಕ್ಷಿಸಲು ಏಳು ಕದಗಳನ್ನು ನಿರ್ಮಿಸಿ, ಇದನ್ನು ಭುವನಗಿರಿ ಕೋಟೆ ಎಂದು ಮರು ನಾಮಕರಣ ಮಾಡಿದನೆಂಬ ಇತಿಹಾಸವಿದೆ. ೧೮ನೇ ಶತಮಾನದಲ್ಲಿ ಈ ಕೋಟೆಯು ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ವಶವಾಯಿತು. ಆಗ ಇಲ್ಲಿ ಕಾವಲುಗಾರರು ಎಂಬ ಸೈನಿಕರನ್ನು ಕೋಟೆ ಕಾಯಲು ಬಿಟ್ಟನು. ಹಾಗಾಗಿ ಈ ಕೋಟೆಗೆ ಕವಲೇದುರ್ಗ ಎಂಬ ಹೆಸರು ಬಂತೆAಬ ಪ್ರತೀತಿ ಇದೆ. ಕವಲೇದುರ್ಗ ೧೮೮೨ ರವರೆಗೆ ತಾಲ್ಲೂಕು ಕೇಂದ್ರವಾಗಿತ್ತAತೆ.
ಕವಲೇದುರ್ಗ ಕೋಟೆಯು ದೇವಾಲಯಗಳ ಬೀಡಾಗಿದೆ. ಇಲ್ಲಿ ಸುಮಾರು ಹದಿನೈದು ದೇವಾಲಯಗಳಿವೆ. ಇದೀಗ ಕೆಲವು ಮಾತ್ರ ಕಂಡು ಬರುತ್ತವೆ. ಇಲ್ಲಿನ ದೇವಾಲಯಗಳು ಬಂಡೆಯ ಮೇಲೆ ನಿರ್ಮಾಣಗೊಂಡಿದ್ದು, ನೋಡಲು ಬಹಳ ಸುಂದರವಾಗಿ ಕಾಣುತ್ತವೆ.
ಈ ಕೋಟೆಯ ಗುಹೆಯೊಂದರಲ್ಲಿ ವರ್ಷವಿಡೀ ಬತ್ತದ ನೀರಿನ ಸಣ್ಣ ಕೊಳವನ್ನು ಕಾಣಬಹುದು. ಇದನ್ನು ‘ಗದಾತೀರ್ಥ’ ಎಂದು ಕರೆಯಲಾಗುತ್ತದೆ. ಇಲ್ಲಿ ನೀರಿನ ಮೂಲವನ್ನು ಹುಡುಕಲು ಭೀಮನು ತನ್ನ ಗದೆಯನ್ನು ಬಳಸಿದ್ದನೆಂಬ ಪ್ರತೀತಿ ಇದೆ. ದಂತಕಥೆಗಳ ಪ್ರಕಾರ ಈ ಕೋಟೆಯ ಸುತ್ತಮುತ್ತಲ ಬೆಟ್ಟಗಳಲ್ಲಿ ಹಿಂದೆ ಅನೇಕ ಋಷಿಗಳು ತಪಸ್ಸು ಮಾಡಿದ್ದರಂತೆ. ಹಾಗಾಗಿ ಹಿಂಧೂ ಪುರಾಣದಲ್ಲಿ ಈ ಸ್ಥಳವನ್ನು ಪರಶುರಾಮ ಕ್ಷೇತ್ರ ಎಂದೂ ಸಹ ಕರೆಯಲಾಗುತ್ತಿತ್ತಂತೆ.
ಹಲವು ಪುರಾಣದ ಕಥೆಗಳನ್ನು ಹೊಂದಿರುವ ಕವಲೇದುರ್ಗವು ಪಾಂಡವರಿಗೆ ಮತ್ತು ಅಗಸ್ತö್ಯ ಹಾಗೂ ವಾಲ್ಮೀಕಿ ಋಷಿಗಳಿಗೆ ಆಶ್ರಯತಾಣವಾಗಿತ್ತೆಂದು ಹೇಳಲಾಗುತ್ತದೆ. ಬೆಟ್ಟದ ತುದಿಯಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ನೋಡಬಹುದು. ಇದು ಕೆಳದಿ ಅರಸರ ವಾಸ್ತುಶೈಲಿಯಲ್ಲಿ ನಿರ್ಮಾಣಗೂಂಡಿದೆ. ಈ ದೇವಾಲಯದ ಹೊರ ಗೋಡೆಗಳು ವಿವಿಧ ಕೆತ್ತನೆಗಳಿಂದ ಕೂಡಿವೆ.
ನೀವು ಇಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳನ್ನು ಕಾಣಬಹುದು. ಇದಲ್ಲದೇ, ಜೈಲು, ಮದ್ದು ಗುಂಡುಗಳ ಮನೆ. ಈಜುಕೊಳ ಮುಂತಾದ ಅನಾದಿ ಕಾಲದ ಕಟ್ಟಡಗಳನ್ನು ವೀಕ್ಷಿಸಬಹುದು.
ಹೋಗೋದು ಹೇಗೆ?
ಬೆಂಗಳೂರಿನಿAದ ಕವಲೇದುರ್ಗವು ಸುಮಾರು ೩೬೫ ಕಿಲೋ ಮೀಟರ್ ದೂರದಲ್ಲಿದೆ. ತೀರ್ಥಹಳ್ಳಿಯಿಂದ ೧೮ ಕಿಲೋ ಮೀಟರ್, ಮಂಗಳೂರಿನಿAದ ೧೩೩ ಕಿಲೋ ಮೀಟರ್ ಅಂತರದಲ್ಲಿದೆ. ಶಿವಮೊಗ್ಗದಿಂದ ಇಲ್ಲಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ.
ಕವಲೇದುರ್ಗ ಹತ್ತಿರದಲ್ಲಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿ, ಸುಂದರವಾದ ಆಗುಂಬೆ, ಗಾಜನೂರು ಅಣೆಕಟ್ಟು, ಕುಂದಾದ್ರಿ ಬೆಟ್ಟ, ಮಂಡಗದ್ದೆ ಪಕ್ಷಿಧಾಮ ಮುಂತಾದ ಪ್ರವಾಸಿ ತಾಣಗಳಿವೆ.


