ಸುದ್ದಿಸಂಗಾತಿ ನ್ಯೂಸ್
ಬೆಂಗಳೂರು: ಸಾತ್ವಿಕ ಶಕ್ತಿಯಂತಿದ್ದ ಕುವೆಂಪು ಕರೆಕೊಟ್ಟಂತೆ ಅಧೀನ ಮನಸ್ಥಿತಿಯಿಂದ ಹೊರಬಂದು ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕುವೆಂಪು ಸಾಹಿತ್ಯವನ್ನು ಮತ್ತೆ ಮತ್ತೆ ಓದಿಕೊಂಡಲ್ಲಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ,” ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ವಿಚಾರಸಂಕಿರಣ, ವಿಶ್ವಚೇತನ ಪ್ರಶಸ್ತಿ ಪ್ರದಾನ, ಕನ್ನಡ ಪ್ರತಿಭಾ ಪುರಸ್ಕಾರ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕುವೆಂಪು ಅವರ ಸಾಹಿತ್ಯವನ್ನು ಮರು ಅಧ್ಯಯನ ಮಾಡುವ ಅಗತ್ಯವಿದೆ. ರಾಜಕೀಯ ಮತ್ತು ಧಾರ್ಮಿಕ ಪ್ರಭುತ್ವಗಳು ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ಸಂದರ್ಭದಲ್ಲಿ ಪ್ರಶ್ನಿಸುವ ಹ ಮತ್ತು ಸ್ವತಂತ್ರ ನಿಲುವು ತಾಳುವ ಸಾಮರ್ಥ್ಯವನ್ನು ಬೆಳೆಸುವುದು ಮುಖ್ಯವಾಗಿದೆ,” ಎಂದು ಅವರು ಪ್ರತಿಪಾದಿಸಿದರು.
“ಅಪಾರ ತೇಜಸ್ಸು, ಆಧ್ಯಾತ್ಮಿಕ ಗಾಂಭೀರ್ಯ, ರಸಿಕ ಮನಸ್ಸುಮತ್ತು ದಾರ್ಶನಿಕ ದೃಷ್ಟಿಕೋನ ಹೊಂದಿದ್ದ ಕುವೆಂಪು ಯುವಕರಕುರಿತು ಹೆಚ್ಚಿನ ಆಸ್ಥೆ ಹೊಂದಿದ್ದರು. ಅವರ ಸಾಹಿತ್ಯದ ಪ್ರಮುಖ ಆಶಯ ಜನರನ್ನು ಜಾಗೃತಗೊಳಿಸುವುದಾಗಿತ್ತು. ‘ಶೂದ್ರ ತಪಸ್ವಿ’, ‘ನೇಗಿಲ ಯೋಗಿ’, ‘ವಿಚಾರ ಕ್ರಾಂತಿಗಾಗಿ ಆಹ್ವಾನ’, ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’
ಮೊದಲಾದ ಕೃತಿಗಳ ಮೂಲಕ ಸಾಮಾಜಿಕ ಸಮಾನತೆ, ಸ್ವತಂತ್ರ ಚಿಂತನೆ ಹಾಗೂ ಆತ್ಮಶಕ್ತಿಯ ಮಹತ್ವವನ್ನು ಪ್ರತಿಪಾದಿಸಿದ್ದರು,” ಎಂದು ಅವರು ಹೇಳಿದರು.
‘ವಿಜಯ ಕರ್ನಾಟಕ’ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಮಾತನಾಡಿ, ‘ಸಾಮಾಜಿಕ ಮಾಧ್ಯಮ ಕೂಡ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ನಮ್ಮ ಊಟ, ಉಡುಗೆ, ಪ್ರವಾಸಗಳನ್ನು ನಿಯಂತ್ರಿಸುತ್ತಿದೆ. ಹೀಗಾಗಿ, ಸಮರ್ಪಕ ಬಳಕೆ ಮತ್ತು ಸಮಯದ ನಿಯಂತ್ರಣದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ. ಪೋಷಕರು ಕೇವಲ ಮಕ್ಕಳನ್ನು ಟೀಕಿಸದೆ ಪೀಳಿಗೆಯ ಮನೋಭಾವ ಅರ್ಥೈಸಿಕೊಂಡು ತಮ್ಮನ್ನು ತಂತ್ರಜ್ಞಾನದಲ್ಲಿ ನವೀಕರಿಸಿಕೊಳ್ಳಬೇಕು,” ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಕರೀಗೌಡ ಬೀಚನಹಳ್ಳಿ, “ಮೊಬೈಲ್ ಅಥವಾ ಕೃತಕ ಬುದ್ದಿಮತ್ತೆಯಿಂದ ದೊರೆಯುವ ಮಾಹಿತಿಗೆ ಸೀಮಿತವಾಗದೆ ಮಕ್ಕಳಲ್ಲಿ ಸ್ವತಂತ್ರ ಚಿಂತನೆ, ಗ್ರಹಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಬೇಕು. ಮಾಹಿತಿ ಮಾತ್ರವಲ್ಲದೆ, ಸಾಹಿತ್ಯದ ಒಡನಾಟವೂ ಅಗತ್ಯ,” ಎಂದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಜೀವನ್ಮುಖಿ ಸುರೇಶ್ ಮಾತನಾಡಿ, “ಕಳೆದ ಎರಡು ದಶಕದಿಂದ ವೇದಿಕೆಯಿಂದ ಸಾಹಿತ್ಯ, ಸಂಸ್ಕೃತಿ ಕುರಿತಾದ ಚಿಂತನೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿ ಗಳು ಕುವೆಂಪು ಅವರನ್ನು ಅರಿತು ಅವರ ರೀತಿ ಸಾಧನೆ ಹಾದಿಯಲ್ಲಿ ಸಾಗಲಿ ಎಂಬುದು ನಮ್ಮ ಆಶಯವಾಗಿದೆ,” ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ, ರೈಲ್ವೆ ಡಿಐಜಿಪಿ ಜೆ.ಕೆ. ರಶ್ಮಿ ಹಾಗೂ ಅಕ್ಕ ಯುಎಸ್ಎ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕೀಲರ ಇವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

