ಸಾಮಾನ್ಯವಾಗಿ ‘ಸಂವಿಧಾನ’ಎಂದರೆ, ‘ವ್ಯವಸ್ಥೆಯನ್ನು ಕಾನೂನಿನ್ವಯ ವಿಧಿಪೂರ್ವಕಗೊಳಿಸುವದು’ ಎಂದು ಹೇಳಬಹುದು. ‘ಸಂವಿಧಾನ’ಎಂಬ ಪದವು ಲ್ಯಾಟಿನ್ ಭಾಷೆಯಿಂದ ಬಂದ ಪದವಾಗಿದೆ. ಶತಮಾನಗಳಿಂದಲೂ ‘ಸಂವಿಧಾನ’ ಎಂಬ ಪದವು ಆಡಳಿತಾತ್ಮಕ ಕಾನೂನಗಳ ರಚನೆ ಎಂಬ ಅರ್ಥದಲ್ಲಿಯೇ ಎಲ್ಲಾ ಕಡೆ ಚಾಲ್ತಿಯಲ್ಲಿತ್ತು. ಹಲವು ವರ್ಷಗಳ ನಂತರ ‘ಸರಕಾರದ ಕಾನೂನು ಚೌಕಟ್ಟು’ ಎಂಬ ಅರ್ಥವ್ಯಾಪ್ತಿಯನ್ನು ಮೀರಿ ಸಂವಿಧಾನ ಎಂಬ ಪದವು ಹೆಚ್ಚಿನ ವಿಶಾಲತೆಯನ್ನು ಪಡೆದುಕೊಂಡಿತು. ಸಂವಿಧಾನ ತಜ್ಞ ಬೋಲಿಂಗ್ ಬ್ರೇಕ್ “ಸಮುದಾಯದ ಹಿತಕ್ಕಾಗಿ ಮತ್ತು ಕೆಲವೊಂದು ಗುರಿಗಳನ್ನು ಸಾಧಿಸುವ ಸಲುವಾಗಿ ತನ್ನನ್ನು ತಾನು ಆಡಳಿತದ ಸುವ್ಯವಸ್ಥೆಗೆ ತೆರೆದುಕೊಳ್ಳಲು ಮಾಡಿಕೊಂಡಿರುವ ಕಾನನೂಗಳ ಕಂತೆಯೇ ಸಂವಿಧಾನ” ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ವ್ಯಾಖ್ಯಾನವೂ ಸಹ ಆಧುನಿಕ ಸಂದರ್ಭದಲ್ಲಿ ಬಳಸುತ್ತಿರುವ ಈ ಪದದ ಅರ್ಥವ್ಯಾಪ್ತಿಯನ್ನು ಒಳಗೊಂಡಿಲ್ಲ. ಸರಕಾರಗಳ ವಿವಿಧ ಅಂಗಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ನಿಗದಿಗೊಳಿಸುವ ಮತ್ತು ಪರಿಮಿತಗೊಳಿಸುವ ಮೂಲಭೂತ ಕಾನೂನುಗಳು ಎಂಬ ಅರ್ಥವು ನಂತರದ ದಿನಗಳಲ್ಲಿ ಸಂವಿಧಾನ ಎಂಬ ಪದಕ್ಕೆ ಬಂದಿತು. ಥಾಮಸ್ ಪೆಯ್ನ್ ಅವರು ಸಂವಿಧಾನದ ಕುರಿತು “ಸಂವಿಧಾನ ಸರಕಾರದ ಕಾನೂನಲ್ಲ ಬದಲಾಗಿ ಸರಕಾರವನ್ನು ಮಾಡುವ ಜನತೆಯ ಕಾನೂನುಗಳು ಮತ್ತು ಸಂವಿಧಾನವಿಲ್ಲದ ಸರಕಾರವೆಂದರೆ, ಹಕ್ಕುಗಳಿಲ್ಲದ ಅಧಿಕಾರದಂತೆ”ಎಂಬ ವ್ಯಾಖ್ಯಾನವನ್ನು ನೀಡಿದರು.

ಮಹಾತ್ಮಗಾಂಧೀಜಿಯವರು 1922ರಲ್ಲಿ ಮೊಟ್ಟ ಮೊದಲ ಬಾರಿಗೆ ‘ನಮ್ಮ ದೇಶಕ್ಕೆ ನಮ್ಮದೇ ಆದ ಸಂವಿಧಾನ ಬೇಕು’ ಎಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆಯುವ ಮೂಲಕ ಬ್ರಿಟಿಷ್ ಸರ್ಕಾರವನ್ನು ಒತ್ತಾಯ ಮಾಡಿದರು. ಆನಂತರ ಅನಿಬಿಸೆಂಟ್ರವರು 1925 ರಲ್ಲಿ ‘ಕಾಮನ್ವೆಲ್ತ್ ಆಫ್ ಇಂಡಿಯಾ ಆಕ್ಟ್ ನ್ನು ಸಿದ್ದಪಡಿಸಿದರು ಮತ್ತು ಭಾರತವು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳುವ ಸಲುವಾಗಿ ಸಂವಿಧಾನ ರಚನಾ ಸಭೆಯನ್ನು ರಚಿಸುವ ಮೂಲಕ ಇದಕ್ಕೆ ಅವಕಾಶ ನೀಡಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿದರು.
1945ರಲ್ಲಿ ದ್ವಿತೀಯ ಮಹಾಯುದ್ಧವು ಕೊನೆಗೊಂಡ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆಯು ಆದ್ಯತೆಯನ್ನು ಪಡೆಯಿತು. ಅಧಿಕಾರವನ್ನು ಸರಾಗವಾಗಿ ಹಸ್ತಾಂತರಿಸಲು ವಿಧಿ ವಿಧಾನಗಳನ್ನು ಸೂಚಿಸುವ ಸಲುವಾಗಿ ಬ್ರಿಟಿಷ್ ಸರ್ಕಾರವು ತ್ರಿ ಸದಸ್ಯ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಈ ನಿಯೋಗಕ್ಕೆ ‘ಕ್ಯಾಬಿನೆಟ್ ಮಿಷನ್’ ಎಂದು ಹೆಸರಿಸಲಾಗಿತ್ತು. ಸರ್. ಸ್ಟಾಫರ್ಡ್ ಕ್ರಿಪ್ಸ್ ನೇತೃತ್ವದ ಈ ಕ್ಯಾಬಿನೆಟ್ ನಿಯೋಗವು ಮಾರ್ಚ್ 16,1946ರಂದು ಅದು ತನ್ನ ಸಲಹೆಗಳನ್ನು ಸಲ್ಲಿಸಿ ಆಡಳಿತ ನಿರ್ವಹಣೆಗಾಗಿ ಭಾರತಕ್ಕೆ ಒಂದು ಸಂವಿಧಾನವನ್ನು ರಚಿಸಲು ರಾಜ್ಯಾಂಗ ಸಭೆಯೊಂದನ್ನು ರಚಿಸಬೇಕೆಂದು ಸಲಹೆ ಮಾಡಿತು.
ಬ್ರಿಟಿಷ್ ಸರ್ಕಾರ 1946ರಲ್ಲಿ ಭಾರತದ ಸಂವಿಧಾನ ಸಭೆಯ ಸದಸ್ಯರನ್ನು ಪ್ರಾಂತೀಯ ಶಾಸನ ಸಭೆಗಳ ಸದಸ್ಯರು ಚುನಾಯಿಸಬೇಕೆಂಬ ಪ್ರಸ್ತಾಪವನ್ನು ಇಟ್ಟಿತು. ಆ ಪ್ರಕಾರ ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದವು. ಪ್ರಾಂತೀಯ ವಿಧಾನಸಭೆಗಳು ಸದಸ್ಯರನ್ನು ಆರಿಸಿದವು. ಕಾಂಗ್ರೆಸ್ಸಿನ ವಿರೋಧದಿಂದಾಗಿ ಮುಂಬೈನಿಂದ ಆಯ್ಕೆ ಆಗಲು ಅಂಬೇಡ್ಕರ್ ಅವರಿಗೆ ಸಾಧ್ಯವಾಗಲಿಲ್ಲ. ಆಗ ಅಂಬೇಡ್ಕರ್ರವರು ಬಂಗಾಳ ಶಾಸನ ಸಭೆಯ ಯೂರೋಪಿಯನ್ ಸದಸ್ಯರ ಬೆಂಬಲ ಪಡೆಯುವುದಕ್ಕಾಗಿ ಕಲ್ಕತ್ತಾಕ್ಕೆ ಹೋದರು. ಆದರೆ ಯೂರೋಪಿಯನ್ ಸದಸ್ಯರುಗಳು ತಾವು ಕೂಡ ಚುನಾವಣೆಯಲ್ಲಿ ಭಾಗವಹಿಸುವ ತೀರ್ಮಾನ ಮಾಡಿದ್ದೇವೆಂದು ತಿಳಿಸಿದರು. ಇದರಿಂದ ನಿರಾಶರಾದ ಅಂಬೇಡ್ಕರ್ರವರು ತಾವು ಸಂವಿಧಾನ ಸಭೆಗೆ ಆಯ್ಕೆಯಾಗುವ ಅವಕಾಶ ಕಡಿಮೆ ಎಂಬ ವಿಷಯವನ್ನು ಅಂದಿಗೆ ಬಂಗಾಳದ ಪ್ರಮುಖ ರಾಜಕೀಯ ಮುಖಂಡರಾಗಿದ್ದ ಜೋಗೇಂದ್ರನಾಥ್ ಮಂಡಲ್ರವರಿಗೆ ತಿಳಿಸಿದರು. ಅದಕ್ಕೆ ಮಂಡಲ್ರವರು ನಾನು ನಿಮ್ಮ ಗೆಲುವಿಗೆ ಶ್ರಮಿಸುವೆ, ಎಂಬ ಆಶ್ವಾಸನೆ ನೀಡಿದರು. ನಂತರ ಅಂಬೇಡ್ಕರ್ರವರು ಸ್ಪರ್ಧಿಸಿದರು. ಜೋಗೇಂದ್ರನಾಥ್ ಮಂಡಲ್ರವರು ಅಂಬೇಡ್ಕರ್ರವರ ಗೆಲುವಿಗೆ ಶ್ರಮಿಸಿದರು. ಪರಿಶಿಷ್ಟ ಜಾತಿಗಳ ಫೆಡರೇಶನನ್ನಿನ ಕಾರ್ಯಕರ್ತರುಗಳು ಸಹ ಶ್ರಮಿಸಿದರು. ಇದರ ಫಲವಾಗಿ ಅಂಬೇಡ್ಕರ್ ಅವರು ಬಂಗಾಳ ವಿಧಾನಸಭೆಯಿಂದ ಅತಿ ಹೆಚ್ಚು ಮತಗಳಿಂದ ಆಯ್ಕೆಗೊಂಡು ರಾಜ್ಯಾಂಗ ಸಭೆಯನ್ನು ಪ್ರವೇಶಿಸಿದರು. ಪರಿಶಿಷ್ಟ ಜಾತಿ, ಜನಾಂಗಗಳ ಹಿತಾಸಕ್ತಿಯನ್ನು ಕಾಪಾಡಬೇಕೆಂಬ ಡಾ.ಅಂಬೇಡ್ಕರ್ರವರ ಆಶಯವೇ ಅವರು ಸಂವಿಧಾನ ರಚನಾ ಸಮಿತಿಯ ಸಭೆಯನ್ನು ಪ್ರವೇಶಿಸಲು ಪ್ರಮುಖ ಕಾರಣ.![]()
ಭಾರತದ ಸಂವಿಧಾನ ರಚನೆಗೆ ಸಂಬಂಧಪಟ್ಟಂತೆ ಮೊಟ್ಟಮೊದಲನೆಯ ಸಭೆಯು ಡಿಸೆಂಬರ್ 9,1946ರಂದು ಸೇರಿತು. ಒಟ್ಟು 296 ಸದಸ್ಯರು ಉದ್ಘಾಟನಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದರು. ಆದರೆ ಇವರ ಪೈಕಿ 207 ಸದಸ್ಯರು ಮಾತ್ರ ಮೊದಲ ಸಭೆಗೆ ಹಾಜರಾದರು. ಆಚಾರ್ಯ ಜೆ.ಬಿ. ಕೃಪಲಾನಿ ಅವರು ತಾತ್ಕಾಲಿಕವಾಗಿ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕೆಂದು ಶ್ರೀ ಸಚ್ಚಿದಾನಂದ ಸಿನ್ಹಾರವರಲ್ಲಿ ಮನವಿ ಮಾಡಿಕೊಂಡರು. ಆನಂತರ ಶ್ರೀ ಫ್ರಾಂಕ್ ಆಂಥೋಣಿ ಅವರನ್ನು ಉಪಾಧ್ಯಕ್ಷರನ್ನಾಗಿ ನಾಮಕರಣ ಮಾಡಲಾಯಿತು. ಇದಾದ ನಂತರ ಸದಸ್ಯರು ದೃಢೀಕರಣ ಪರಿಚಯ ಪತ್ರಗಳನ್ನು ಒಪ್ಪಿಸಿ ರಿಜಿಸ್ಟರ್ನಲ್ಲಿ ಸಹಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ರವರು ಬಂಗಾಳದ ಒಬ್ಬ ಸದಸ್ಯರಾಗಿ ಸಹಿ ಮಾಡಿದರು.
ರಾಜ್ಯಾಂಗ ರಚನಾ ಸಭೆಯ ಅಧ್ಯಕ್ಷರ ಚುನವಾವಣೆಗೆ ಸಂಬಂಧಿಸಿದಂತೆ ಇರಬೇಕಾದ ನಿಯಮಗಳನ್ನು ಡಿಸೆಂಬರ್ 10,1946ರಂದು ಸಭೆಯು ಅಂಗೀಕರಿಸಿತು. ಡಿಸೆಂಬರ್ 11,1946 ರಂದು ನಡೆದ ಸಭೆಯಲ್ಲಿ ರಾಜ್ಯಾಂಗ ರಚನಾ ಸಭೆಯ ಖಾಯಂ ಅಧ್ಯಕ್ಷರಾಗಿ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಸಂವಿಧಾನ ರಚನಾ ಸಭೆಯು ಗೊತ್ತುವಳಿಗಳನ್ನು ಜನವರಿ 22,1947ರಂದು ಅವಿರೋಧವಾಗಿ ಅಂಗೀಕರಿಸಿತು. ಆಗಸ್ಟ್ 29,1947 ರಂದು ಕರಡು ರಚನಾ ಸಮಿತಿಯೊಂದನ್ನು ರಚಿಸಲಾಯಿತು. ಈ ರಚನಾ ಸಮಿತಿಯಲ್ಲಿ 389 ಸದಸ್ಯರುಗಳಿದ್ದರು. ಇವರ ಪೈಕಿ 296 ಸದಸ್ಯರು ಬ್ರಿಟಿಷ್ ಭಾರತದಿಂದ ಚುನಾಯಿತರಾದರೆ ಉಳಿದ 93 ಸದಸ್ಯರು ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಂಡರು. ಸಂವಿಧಾನದ ಸಲಹೆಗಾರರು ಸಿದ್ದಪಡಿಸಿದ ಸಂವಿಧಾನದ ವಿವಿಧ ಉಪಬಂಧಗಳನ್ನು ಪರಿಶೀಲಿಸಿ ಸಮಿತಿಯು ಪರಿಷ್ಕರಿಸಿದ ಕರಡು ಸಂವಿಧಾನವನ್ನು ಪರ್ಯಾಲೋಚನೆಗಾಗಿ ಸಭೆಗೆ ಒಪ್ಪಿಸುವುದು ಸಮಿತಿಯ ಜವಾಬ್ದಾರಿಯಾಗಿತ್ತು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜವಾಹರಲಾಲ ನೆಹರೂ ಸರ್ದಾರ್ ವಲ್ಲಬಾಯ್ ಪಟೇಲರು ಆ ಕಾಲಘಟ್ಟದಲ್ಲಿ ಹಲವಾರು ರಾಷ್ಟ್ರಗಳ ಸಂವಿಧಾನವನ್ನು ಸಿದ್ದಪಡಿಸುವ ಮೂಲಕ ಅಂತರರಾಷ್ಟ್ರೀಯ ಸಂವಿಧಾನ ವಿಶೇಷಜ್ಞರಾಗಿದ್ದ ಸರ್. ಐವರ್ ಜೆನ್ನಿಂಗ್ಸ್ ರನ್ನು ಭಾರತದ ಸಂವಿಧಾನ ರಚನೆಗೆ ಆಹ್ವಾನಿಸಬೇಕೆಂದು ಒಲವು ತೋರಿದ್ದರು. ಆದರೆ ಮಹಾತ್ಮಗಾಂಧೀಜಿಯವರು ನಮ್ಮ ದೇಶದಲ್ಲಿಯೇ ಅದ್ವಿತೀಯ ಕಾನೂನು ಹಾಗೂ ಸಂವಿಧಾನ ತಜ್ಞ ಡಾ. ಬಿ.ಆರ್.ಅಂಬೇಡ್ಕರ್ರವರು ಇರುವಾಗ ಅನ್ಯ ದೇಶದವರನ್ನು ಕರೆಸುವ ಅಗತ್ಯವಿಲ್ಲ ಎಂಬ ಸಲಹೆ ನೀಡಿದರು. ಹಾಗಾಗಿ ಡಾ. ಬಿ.ಆರ್.ಅಂಬೇಡ್ಕರ್ರವರ ಹೆಗಲಿಗೆ ಭಾರತದ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಬಿದ್ದಿತು.
ಕಾಂಗ್ರೆಸ್ ಸಹ ಆತ್ಮಾವಲೋಕನ ಮಾಡಿಕೊಂಡು ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಾತ್ಮಕ ವಿಷಯಗಳ ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಎಂದು ಪರಿಭಾವಿಸಿ ಅವರ ಮರು ಆಯ್ಕೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿತು. ಅಂಬೇಡ್ಕರ್ರವರು ಸಂವಿಧಾನ ರಚನಾ ಸಭೆಯಲ್ಲಿ ಇರಲೇಬೇಕಾದ ಔಚಿತ್ಯವನ್ನು ಅವರ ಕಾನೂನಿನ ಜ್ಞಾನದ ಆಧಾರದ ಮೇಲೆ ನಿರ್ಣಯಿಸಲಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರನ್ನು ಮರು ಆಯ್ಕೆ ಮಾಡಿದ್ದು ಅವರಲ್ಲಿನ ಸಂವೈಧಾನಿಕ ಜ್ಞಾನದಿಂದ ಮಾತ್ರ, ಇಲ್ಲಿ ಪ್ರಾತಿನಿಧ್ಯದ ಮಾನದಂಡ ನಿರ್ಧಾರಕವಾಗಿರಲಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಡಾ ಬಿ ಆರ್ ಅಂಬೇಡ್ಕರ್ ಅವರ ವೃತ್ತಿಪರತೆ, ಸಂವಿಧಾನದ ಬಗೆಗಿನ ಅಸಾಧಾರಣವಾದ ಜ್ಞಾನ, “ಸ್ಟೇಟ್ ಅಂಡ್ ಮೈನಾರಿಟೀಸ್” ಮೇಲಣ ಅವರ ಅದ್ಭುತವಾದ ಕಾರ್ಯಗಳು, ನಿರ್ವಂಚನೆಯಿಂದ ಕೂಡಿದ ಅವರ ರಾಷ್ಟ್ರಪ್ರೇಮ ಭಾವನೆಗಳು ಅವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲ್ಪಟ್ಟ ಅರ್ಹತೆಗಳಾದವು.
ಭಾರತಕ್ಕೆ ಶಾಶ್ವತ ಮತ್ತು ಸಂಘಟಿತ ಸಂವಿಧಾನವನ್ನು ರಚಿಸುವ ಉದ್ದೇಶದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಆಗಸ್ಟ್ 28,1947 ರಂದು ಕರಡು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ ಸಮಿತಿಯು 141 ದಿನಗಳ ತರುವಾಯ ಸಂವಿಧಾನದ ಮೊದಲ ಕರಡನ್ನು ನವೆಂಬರ್ 4,1947ರಂದು ವಿಧಾನಸಭೆಗೆ ಸಲ್ಲಿಸಿತು. ಸಂವಿಧಾನ ಮಸೂದೆಯನ್ನು ಫೆಬ್ರವರಿ 26,1948ರಂದು ಭಾರತ ಸರ್ಕಾರದ ಗೆಜೆಟ್ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಜನಾಭಿಪ್ರಾಯವನ್ನು ತಿಳಿದುಕೊಳ್ಳುವುದಕ್ಕಾಗಿ ಪ್ರಕಟಿಸಲಾಯಿತು. ಸುಮಾರು ಎಂಟು ತಿಂಗಳವರೆಗೂ ಜನತೆಯ ಅವಗಾಹನೆಗೆ ಒಳಪಡಿಸಲಾಗಿತ್ತು. 
ನವೆಂಬರ್ 4,1948ರಂದು ಭಾರತದ ಸಂವಿಧಾನ ಸಭೆಯು ನವದೆಹಲಿಯ ಸಂವಿಧಾನ ಭವನದಲ್ಲಿ ನಡೆಯಿತು. ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್ರವರು ಮಧ್ಯಾಹ್ನದ ನಂತರ ಡಾ.ಬಿ.ಆರ್. ಅಂಬೇಡ್ಕರ್ರವರು ತಮ್ಮ ಗೊತ್ತುವಳಿಯನ್ನು ಮಂಡಿಸುವಂತೆ ಹೇಳಿದರು. ಅದೇ ಪ್ರಕಾರ ಡಾ.ಅಂಬೇಡ್ಕರ್ರವರು ಅಸೆಂಬ್ಲಿಯ ಪರಿಶೀಲನೆಗಾಗಿ ಕರಡು ಸಂವಿಧಾನವನ್ನು ಮಂಡಿಸಿದರು. ಸಂವಿಧಾನ ಸಭೆಗೆ ನವೆಂಬರ್ 4,1948ರಂದು ಕರಡು ಸಂವಿಧಾನವನ್ನು ಒಪ್ಪಿಸಿದ ಮೇಲೆ ಅಂಬೇಡ್ಕರ್ರವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಂಬೇಡ್ಕರ್ರವರ ಭಾಷಣದ ನಂತರ ಒಂದು ಸಂಕ್ಷೇಪವೂ ಸಾಮಾನ್ಯವೂ ಆದ ಚರ್ಚೆ ನಡೆಯಿತು. ಇದನ್ನು ‘ಸಂವಿಧಾನದ ಮೊದಲ ವಾಚನ’ ಎಂದು ಕರೆಯಲಾಗುತ್ತದೆ. ಎರಡನೇ ವಾಚನವು ನವೆಂಬರ್ 15,1948ರಂದು ಆರಂಭವಾಯಿತು. ಇದರಲ್ಲಿ ಸಂವಿಧಾನದ ಒಂದೊಂದು ಒಳ ಪ್ರಕರಣವನ್ನು ಕುರಿತು ವಿವಿರವಾದ ಚರ್ಚೆ ನಡೆಯಿತು. ಚರ್ಚೆ ಎರಡು ದಿನಗಳ ಕಾಲ ಸುದೀರ್ಘವಾಗಿ ನಡೆಯಿತು. ಸಂವಿಧಾನದ ತೃತೀಯ ವಾಚನಕ್ಕಾಗಿ ನವೆಂಬರ್ 14,1949ರಂದು ಸಂವಿಧಾನ ಸಭೆಯು ಸೇರಿತು. ಈ ಸಭೆಯು ನವೆಂಬರ್ 26,1949ರವರೆಗೂ ಒಟ್ಟು ೧೩ ದಿನಗಳ ಕಾಲ ನಡೆಯಿತು .
ಡಾ. ಬಿ. ಆರ್. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯ ಸದಸ್ಯರು. ಸಂವಿಧಾನ ರಚನಾ ಸಮಿತಿಯು ಮೂಲ ತತ್ವಗಳಾದ- ದೇಶದ ಗಣರಾಜ್ಯ, ಸಂಸದೀಯ ಸರ್ಕಾರದ ರೂಪ, ಫೆಡರಲ್ ರಚನೆ, ಮೂಲಭೂತ ಹಕ್ಕುಗಳು, ಸ್ವತಂತ್ರ ನ್ಯಾಯಾಂಗ ಶಾಖೆ ಮೊದಲಾದ ಅಂಶಗಳನ್ನು ಧ್ಯೇಯವಾಗಿ ಹೊಂದಿತ್ತು. ಈ ಅಸೆಂಬ್ಲಿಯ ಅಧಿವೇಶನಗಳು 166 ದಿನಗಳು ನಡೆದವು. ಅದು ಸಾರ್ವಜನಿಕರಿಗೂ ಮುಕ್ತವಾಗಿತ್ತು. ಡಾ.ಅಂಬೇಡ್ಕರ್ರವರು ಕರಡು ಸಂವಿಧಾನದ ಚರ್ಚೆ, ಗೊತ್ತುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಭೆಯ ಹಲವಾರು ಸಂದೇಹಗಳಿಗೆ ಸಮಂಜಸವಾದ ಉತ್ತರಗಳನ್ನು ನೀಡಿದರು. ಕೆಲವೊಮ್ಮೆ ಸುದೀರ್ಘವಾದ ಭಾಷಣಗಳನ್ನು ಮಾಡಿದರು.
ಹಲವಾರು ಚರ್ಚೆಗಳು, ತಿದ್ದುಪಡಿಗಳು ಮತ್ತು ಕಠಿಣ ಪರಿಶ್ರಮದ ನಂತರ, ಜನವರಿ 24,1950 ರಂದು, ಭಾರತದ ಸಂವಿಧಾನದ ಅಂತಿಮ ಕರಡಿನ ಎರಡು ಕೈ-ಲಿಖಿತ ಪ್ರತಿಗಳಲ್ಲಿ (ಹಿಂದಿ ಮತ್ತು ಇಂಗ್ಲಿಷ್) 616 ಸಹಿಗಳನ್ನು ವಿಧಾನಸಭೆಯ 308 ಸದಸ್ಯರು ಮಾಡಿದರು. ಇದಾದ ಎರಡು ದಿನಗಳ ನಂತರ ಅಂದರೆ ಜನವರಿ 26, 1950ರಂದು, 22 ಭಾಗಗಳಲ್ಲಿ 448 ವಿಧಿಗಳನ್ನು, 12 ಪರಿಚ್ಛೇದಗಳನ್ನು ಮತ್ತು 97 ತಿದ್ದುಪಡಿಗಳನ್ನು ಒಳಗೊಂಡ ವಿಶ್ವದ ಸುದೀರ್ಘ ಲಿಖಿತ ಸಂವಿಧಾನವನ್ನು ಮೌಲ್ಯೀಕರಿಸಲಾಯಿತು. ಅಂದಿನ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೊ 1950ರಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಗೆ ಭಾರತದ ಮೊದಲ ಗೌರವ ಅತಿಥಿಯಾಗಿದ್ದರು. ಪ್ರಸ್ತುತ ಸಂವಿಧಾನದ ಮೂಲ ಕೈಬರಹದ ಪ್ರತಿಗಳನ್ನು ಹೀಲಿಯಂ ತುಂಬಿದ ಪೆಟ್ಟಿಗೆಯಲ್ಲಿ ಸಂಸತ್ ಭವನದ ಗ್ರಂಥಾಲಯದಲ್ಲಿ ಇಡಲಾಗಿದೆ.
ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ರವರು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸುವ ಮೂಲಕ ಪ್ರಜಾಪ್ರಭುತ್ವ ಆಡಳಿತಕ್ಕೆ ಬೇಕಾದ ಜನರಿಗೆ ಮೂಲಭೂತ ಹ್ಕಕುಗಳು ಮತ್ತು ವಯಸ್ಕ ಮತದಾನ ವ್ಯವಸ್ಥೆ ಹಾಗೂ ಚುನಾವಣಾ ಪದ್ಧತಿಯನ್ನು ಅಳವಡಿಸಿದರು. ಭಾರತದಲ್ಲಿ ರಾಜಪ್ರಭುತ್ವಕ್ಕೆ ಬದಲಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಮುನ್ನುಡಿ ಬರೆದರು.
ವೈವಿಧ್ಯತೆಗಳಿಲ್ಲದ, ಏಕರೂಪ ನಾಗರೀಕತೆ ಮತ್ತು ಸಂಸ್ಕೃತಿಗಳ ನೆಲೆವೀಡುಗಳಾದ ದೇಶಗಳಿಗೆ ಸಂವಿಧಾನಗಳನ್ನು ರಚನೆ ಮಾಡುವುದು ನಿರಾಯಾಸವಾದ ಕಾರ್ಯ. ಆದರೆ ಭಾರತದಂತಹ ರಾಷ್ಟ್ರಕ್ಕೆ ಸಂವಿಧಾನ ರಚನೆ ತುಂಬಾ ಶ್ರಮದಾಯಕವಾದುದು. ಅಂಬೇಡ್ಕರ್ರವರು ಸಂವಿಧಾನ ಪ್ರಜ್ಞೆಯ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಬೆಸೆಯುವ ಧೋರಣೆ ಹೊಂದಿದ್ದರು. ಆ ಮೂಲಕ ರಾಷ್ಟ್ರದ ಬಹುಸಂಖ್ಯಾತ ಜಾತಿಗಳಿಗೆ ಶಾಶ್ವತವಾದ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಆದ್ದರಿಂದಲೇ ಡಾ ಬಿ.ಆರ್.ಅಂಬೇಡ್ಕರ್ರವರು ರಾಷ್ಟ್ರೀಯ ಪ್ರಜ್ಞೆ ಮತ್ತು ಸಂವಿಧಾನಿಕ ಪ್ರಜ್ಞೆಗಳೆರಡು ಒಂದೇ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇಡೀ ಜಗತ್ತಿನ ಪ್ರಶಂಸೆಗೆ ಒಳಗಾಗಿರುವ ಭಾರತದ ಅದ್ಭುತವಾದ ಸಂವಿಧಾನವನ್ನು ರಚಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ರವರಿಗೆ ಸಲ್ಲುತ್ತದೆ. ಪ್ರಪಂಚದಲ್ಲಿ ಅರ್ಥಶಾಸ್ತçಜ್ಞನಿಂದ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡು ರಚನೆಯಾಗಿರುವ ಏಕೈಕ ಸಂವಿಧಾನವೆAದರೆ ಅದುವೇ ಭಾರತೀಯ ಸಂವಿಧಾನ. ಆದರೆ ಕೆಲವು ಸಿನಿಕತೆಯ ಮನಸ್ಸಿನವರು ಮತ್ತು ಸತ್ಯವನ್ನು ಅರಗಿಸಿಕೊಳ್ಳಲಾಗದ ಮನಸ್ಸುಗಳು ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಇಂದಿನವರೆಗೂ ‘ಸಂವಿಧಾನವನ್ನು ಬರೆದವರು ಯಾರು?” ಎನ್ನುವ ಕುರಿತು ಅನಗತ್ಯ ಮತ್ತು ಪಕ್ಷಪಾತದಿಂದ ಕೂಡಿದ ಚರ್ಚೆಯನ್ನು ನಡೆಸುತ್ತಿದ್ದಾರೆ.
ಕೆ. ಚೆಂಗಲರಾಯ ರೆಡ್ಡಿ, ಟಿ. ಸಿದ್ದಲಿಂಗಯ್ಯ, ಹೆಚ್. ಆರ್. ಗುರುವ್ ರೆಡ್ಡಿ, ಎಸ್. ವಿ. ಕೃಷ್ಣಮೂರ್ತಿ ರಾವ್, ಕೆ. ಹನುಮನಂತಯ್ಯ, ಹೆಚ್. ಸಿದ್ದವೀರಪ್ಪ, ಟಿ. ಚನ್ನಯ್ಯ ಸೇರಿ ಸಂವಿಧಾನ ಶಾಸನ ಸಭೆಯಲ್ಲಿ ಏಳು ಜನ ಕನ್ನಡಿಗರು ಮೈಸೂರು ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು. ಬಿ.ಎಲ್. ಮಿಟ್ಟೆರ್ರು ಅನಾರೋಗ್ಯದ ಕಾರಣ ಸಂವಿಧಾನ ರಚನಾ ಸಭೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಮೈಸೂರಿನ ಮಾಜಿ ದಿವಾನರಾಗಿದ್ದ ಹಾಗೂ ಒರಿಸ್ಸಾ ರಾಜ್ಯದಿಂದ ಪ್ರತಿನಿಧಿಸಿದ್ದ ಏನ್. ಮಾಧವ ರಾವ್ ಅವರನ್ನು ಸೇರಿಸಿಕೊಳ್ಳಲಾಯಿತು.
ಎಸ್.ನಿಜಲಿಂಗಪ್ಪ ಮತ್ತು ಆರ್.ದಿವಾಕರ್ ಬಾಂಬೆ ಪ್ರಾಂತ್ಯದಿಂದ ಹಾಗೂ ಕೂರ್ಗ್ ಪ್ರಾಂತ್ಯದಿಂದ ಕೆ.ಎಂ.ಪೂಣಚ್ಚ ಸಂವಿಧಾನ ಸಭೆಯನ್ನು ಪ್ರತಿನಿಧಿಸಿದ್ದರು . ಸುಚೇತಾ ಕೃಪಲಾನಿ, ವಿಜಯಲಕ್ಷ್ಮ ಪಂಡಿತ್, ಸರೋಜಿನಿ ನಾಯ್ಡು, ಹಂಸ ಮೆನನ್, ರಾಜಕುಮಾರಿ ಅಮೃತ್ ಕೌರ್ ಸೇರಿದಂತೆ ಒಟ್ಟು 15 ಮಂದಿ ಮಹಿಳಾ ಸದಸ್ಯರಿದ್ದರು.
ರಾಜ್ಯಾಂಗ ಸಭೆಯು ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸುವ ಕೆಲಸವನ್ನು ಡಿಸೆಂಬರ್ 9,1946ರಂದು ಆರಂಭಿಸಿತು. ಒಟ್ಟು 2969 ಸದಸ್ಯರು ಉದ್ಘಾಟನಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದರು. ಆದರೆ ಅವರಲ್ಲಿ 207 ಜನ ಮಾತ್ರ ಹಾಜರಾದರು. ಅಂದು ಬೆಳಗ್ಗೆ 11 ಗಂಟೆಗೆ ಭಾರತದ ರಾಜ್ಯಾಂಗ ರಚನಾ ಸಭೆಯ ಮೊದಲನೆಯ ಸಭೆಯು ನವದೆಹಲಿಯ ಸಂವಿಧಾನ ಭವನದಲ್ಲಿ ಪ್ರಾರಂಭವಾಯಿತು. ಸಂವಿಧಾನ ರಚನಾ ಸಮಿತಿ ಇದ್ದಿತಾದರೂ ಅದರಲ್ಲಿ ಪ್ರಖ್ಯಾತ ಕಾನೂನು ಪಂಡಿತರು ಇದ್ದರಾದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಸಂವಿಧಾನವನ್ನು ನಿಸ್ಸಂಶಯವಾಗಿ ಅಕ್ಷರಶಃ ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೇಳುವುದಕ್ಕೆ ಎಲ್ಲಾ ದಾಖಲೆಗಳು, ಪುರಾವೆಗಳು, ಸಾಕ್ಷಿಗಳು ಸಾಬೀತು ಮಾಡಿವೆ.
ಅಂಬೇಡ್ಕರ್ ಅವರು ಸಿದ್ಧಪಡಿಸಿದ ಸಂವಿಧಾನದ ಮೂಲಕ ಅಸ್ಪೃಶ್ಯತೆಯ ನಿರ್ಮೂಲನೆ, ಎಲ್ಲಾ ರೀತಿಯ ತಾರತಮ್ಯಗಳ ನಿಷೇಧ ಸೇರಿದಂತೆ ನಾಗರಿಕರಿಗೆ ಅಗತ್ಯವಾದ ರಕ್ಷಣೆ ಮತ್ತು ಸ್ವಾತಂತ್ರ್ಯಗಳನ್ನು ಸಾಂವಿಧಾನಿಕ ಭರವಸೆಗಳನ್ನು ಮತ್ತು ರಕ್ಷಣೆಗಳನ್ನು ಒದಗಿಸಿತು. ವಿಶ್ವದ ಸುಮಾರು 55ಕ್ಕೂ ಹೆಚ್ಚು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ ಪ್ರಪಂಚದ ಮೊದಲ ವ್ಯಕ್ತಿಯಾಗಿ ಅಂಬೇಡ್ಕರ್ರವರು ಹೊರಹೊಮ್ಮಿದರು.

ಸಂವಿಧಾನ ತಜ್ಞರಾದ ಡಾ. ಎಂ.ವಿ.ಪೈಲಿಯವರು “ 15000 ಪುಟಗಳಿಗೂ ಹೆಚ್ಚಿನ ಸಂವಿಧಾನ ರಚನಾ ಸಭೆ ಕಾರ್ಯಕಲಾಪಗಳ ಪ್ರಕಟಿತ ವರದಿಗಳನ್ನು ಪರಿಶೀಲಿಸಿದರೆ ಅಂಬೇಡ್ಕರ್ರವರು ಸಂವಿಧಾನಕ್ಕೆ ಕೊಟ್ಟ ಅದ್ಬುತ ಕೊಡುಗೆ ಕಂಡು ಬರುತ್ತದೆ. ಅವರ ವಿಶೇಷ ಗುಣವನ್ನು ಪ್ರಕಟಿಸಿರುವ ಹಲವಾರು ಗಮನಾರ್ಹ ಪ್ರಕರಣಗಳನ್ನು ಗಮನಿಸಬಹುದು. ಅವರು ವಿದ್ವಾಂಸರಲ್ಲಿ ವಿದ್ವಾಂಸರು, ತಮ್ಮ ಮನವರಿಕೆಗಳಲ್ಲಿ ಯಾವುದೇ ವಿಷಯಕ್ಕೂ ಎದರದೆ ಅದನ್ನು ಯಾರ ಮುಂದಾದರೂ ಹೇಳುವ ಖಂಡಿತವಾದಿ ಎದೆಗಾರಿಕೆ ಅವರಲ್ಲಿ ಬೇರೂರಿತ್ತು”ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಪೂರ್ಣವಾಗಿ ಸಂವಿಧಾನವನ್ನು ಅಧ್ಯಯನ ಮಾಡಿದ ಬಳಿಕ 1954ರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ರವರನ್ನು ‘ಸಂವಿಧಾನ ಶಿಲ್ಪಿ’ ಎಂದು ಮೊಟ್ಟ ಮೊದಲ ಬಾರಿಗೆ ಡಾ. ಎಂ.ವಿ.ಪೈಲಿಯವರು ಘೋಷಣೆ ಮಾಡಿದರು.

