ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಜನಪ್ರಿಯ ನಟಿ ರೂಪಿಕಾ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ‘ದೊರೆಸಾನಿ’ ಹಾಗೂ ‘ಲಕ್ಷ್ಮೀ ನಿವಾಸ’
ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ರೂಪಿಕಾ, ತಮ್ಮ ಬಹುಕಾಲದ ಗೆಳೆಯ ಅಂಕಿತ್ ಅವರೊಂದಿಗೆ ವಿವಾಹವಾಗಲಿದ್ದಾರೆ.
ಇತ್ತೀಚೆಗೆ ಕುಟುಂಬದವರ ಸಮ್ಮುಖದಲ್ಲಿ ಲಗ್ನಪತ್ರಿಕೆ ಶಾಸ್ತ್ರ ನೆರವೇರಿದ್ದು, ಈ ಶುಭ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕುಟುಂಬ ಸದಸ್ಯರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೂಪಿಕಾ ಮತ್ತು ಅಂಕಿತ್ ಜೋಡಿ ಸಂತಸದಿಂದ ಕಾಣಿಸಿಕೊಂಡಿದ್ದಾರೆ.
ಬಾಲನಟಿಯಾಗಿ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ರೂಪಿಕಾ, ಹಲವು ಧಾರಾವಾಹಿಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’, ‘ತ್ರಿವೇಣಿ ಸಂಗಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು, 2009ರಲ್ಲಿ ಬಿಡುಗಡೆಯಾದ ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು.
ನಂತರ ‘ತೀರ್ಥರೂಪ’, ‘ಬೀರ’, ‘ರುದ್ರಾಕ್ಷಿಪುರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದ ರೂಪಿಕಾ, ಇತ್ತೀಚಿನ ವರ್ಷಗಳಲ್ಲಿ ‘ದೊರೆಸಾನಿ’ ಮತ್ತು ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
ಈಗ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿರುವ ರೂಪಿಕಾ, ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಂಕಿತ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಭಿಮಾನಿಗಳು ಮತ್ತು ಸಿನಿ-ಕಿರುತೆರೆ ವಲಯದ ಗಣ್ಯರು ಈ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

