ಬೆಂಗಳೂರು, ಜೂ. 3 : ಕರ್ನಾಟಕದ ಹೆಮ್ಮೆಯ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತೋತ್ಸವವನ್ನು ಜೂನ್ 4ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ನಗರದ ಕೃಷ್ಣನಂದನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಬಡಾವಣೆ, ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಲ್ಲಿ ವೈಭವದಿಂದ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಕೆ. ಗೋಪಾಲಯ್ಯ ಅವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಿದ್ದಾರೆ.
ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಮಾರಪ್ಪನಪಾಳ್ಯ ವಾರ್ಡ್ನ ಮುಖಂಡರಾದ ಮಹದೇವ್ ಅವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ವೈಖರಿ, ಸಮಾಜಮುಖಿ ಕಾರ್ಯಗಳು ಹಾಗೂ ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಕುರಿತು ನುಡಿನಮನ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಅರಸ್ ವಹಿಸಲಿದ್ದಾರೆ. ಇದೇ ವೇಳೆ ಜಯರಾಮ್ ಮತ್ತು ಸಂಗಡಿಗರು ನೇತೃತ್ವದ ನಂದಿನಿ ಬಡಾವಣೆಯ ಸೆರ್ಕ್ಯೂಲರ್ ಪಾರ್ಕ್ ವನಗಾನ ತಂಡದಿಂದ ವಿಶೇಷ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.
ರಾಜರ್ಷಿ ಪ್ರಕಾಶನ, ಜನಮನ ಸೇವಾ ಟ್ರಸ್ಟ್, ಪ್ರಜಾಧ್ವನಿ ಜನಪರ ವೇದಿಕೆ ಹಾಗೂ ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶ ಆಡಳಿತ, ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೀಡಿದ ಅಪೂರ್ವ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಜಯಂತೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

