ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಬುದ್ಧನನ್ನು ಒಪ್ಪಿ,ಅಪ್ಪಿಕೊಂಡ ಡಾ.ಬಿ.ಆರ್.ಅಂಬೇಡ್ಕರ್

Posted on April 1, 2026April 1, 2026 by suddisangathi

ಮಹಾಜ್ಞಾನಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಕಾಳಜಿ ಹಾಗೂ ಜನಸೇವೆ ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವಂತದ್ದಲ್ಲ. ಅವರ ಹೋರಾಟದ ಆಳ ಅಗಲಗಳನ್ನು ಅರ್ಥ ಮಾಡಿಕೊಂಡರೆ ಅವರ ಮೇರು ವ್ಯಕ್ತಿತ್ವ ನಮಗೆ ಗೋಚರವಾಗುತ್ತದೆ. ಕೆಲವು ಕಿಡಿಗೇಡಿ ಗುಂಪುಗಳು ಎಲ್ಲಾ ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟ ಮೀಸಲಾತಿಯನ್ನು ಮುಚ್ಚಿಟ್ಟು, ಕೇವಲ ಪರಿಶಿಷ್ಟ ಜಾತಿ ಮೀಸಲಾತಿಯ ಸುತ್ತಲೆ ಗಿರಕಿ ಹೊಡೆಯುತ್ತಾರೆ. ಈ ಮೂಲಕ ಅಂಬೇಡ್ಕರ್ ಅವರು ಭಾರತೀಯ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಮೀಸಲಾತಿ ಎನ್ನುವುದು ಕೇವಲ ದಲಿತ ಸಮುದಾಯಗಳಿಗೆ ಮಾತ್ರ ನೀಡಿರುವ ಸದಾವಕಾಶ ಎನ್ನುವಂತೆ ಬಿಂಬಿಸುತ್ತಲೆ ಅಂಬೇಡ್ಕರ್ ಮಾಡಿಕೊಟ್ಟಿರುವ ಅನುಕೂಲಗಳನ್ನು ತಾವೂ ಕೂಡ ಅನುಭವಿಸಿತ್ತಿದ್ದೇವೆ ಎಂಬುದನ್ನು ಮರೆತು ನಟಿಸುತ್ತಾರೆ. ಈ ನಡವಳಿಕೆಗಳು ನಮ್ಮ ಸಮಾಜದಲ್ಲಿ ಹೊಸದೇನು ಅಲ್ಲ. ಇಂತಹ ವ್ಯಸನಿಗಳಿಗೆ ನಾಡಿನ, ಜನಸಮುದಾಯದ ಕಲ್ಯಾಣಕ್ಕಾಗಿ ತಮ್ಮನ್ನೆ ಅರ್ಪಿಸಿಕೊಂಡವರನ್ನು ಗೌರವದಿಂದ ಕಾಣುವ ವಿಶಾಲ ಮಾನೋಭಾವ ಯಾವತ್ತಿಗೂ ಬರುವುದಿಲ್ಲ.

ಸ್ವತಂತ್ರ ಭಾರತಕ್ಕೆ ಸಂವಿಧಾನ ಬರೆದು ದೇಶದ ಸುಸ್ಥಿರತೆಗೆ ಭದ್ರಬುನಾದಿ ಹಾಕಿದ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಅಂದು ಜಾತಿ ಕಾರಣಕ್ಕೆ ಉಪೇಕ್ಷಿಸಿದ ಜನವರ್ಗದ ಜೊತೆಗೆ ಇಂದು ಸಂವಿಧಾನದ ಪುಷ್ಕಲ ಭೋಜನ ಉಣ್ಣುತ್ತಿರುವ ಶೂದ್ರವರ್ಗಗಳು ಕೂಡ ಅವರನ್ನು ಅನಾದರದಿಂದ ಕಾಣುತ್ತಿರುವುದನ್ನು ನೋಡಿದಾಗ ಮನಸ್ಸಿಗೆ ಖೇದವಾಗುತ್ತದೆ.

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬರಿಗೆ ಅವಮಾನಗಳು, ಅನಾದರಗಳು ಹೊಸದೇನೂ ಅಲ್ಲ. ಅವರ ಬದುಕಿನುದ್ದಕ್ಕೂ ಕಹಿಯನ್ನೆ ಉಂಡು ಅರಗಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ನೆಡೆದ ಇಂತಹ ಅನೇಕ ನೈಜ ಘಟನೆಗಳು ಹಲವಾರು ಕೃತಿಗಲ್ಲಿ ದಾಖಲಾಗಿವೆ. ಅಸ್ಪ್ರಶ್ಯತೆಯೆಂಬ ಭಾರತದ ನೆಲದೊಳಗಿನ ಅಸಹಿಷ್ಣುತೆಯ ಬೇಗೆ ಅವರನ್ನು ಕೇವಲ ಬಾಲ್ಯದಲ್ಲಿ ಮಾತ್ರ ಸುಡಲಿಲ್ಲ. ದೊಡ್ಡವರಾದ ಮೇಲೂ, ವಿದ್ಯಾವಂತರಾದ ಮೇಲೂ, ಹೊರ ದೇಶಗಳ ವಿಶ್ವವಿದ್ಯಾನಿಲಯಗಳಿಂದ ಉನ್ನತ ಶಿಕ್ಷಣ ಪಡೆದು ಬಂದ ಮೇಲೂ, ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ ಮೇಲೂ ತನ್ನ ಕ್ರೂರ ವರ್ತನೆಗಳಿಂದ ಅವರನ್ನು ಅಮಾನವೀಯವಾಗಿ ನೆಡಸಿಕೊಂಡಿದ್ದು ಇದೇ ನೆಲದ ಮಾನವಂತರೆನಿಸಿಕೊಂಡಿದ್ದ ಜನವರ್ಗದ ಅಸಹನೆ.

ಜಾತಿಗಳ ಏಣಿಶ್ರೇಣಿಗಳ ನೆಪದಲ್ಲಿ ಒಂದು ದೊಡ್ಡ ಸಮುದಾಯವನ್ನೆ ಅಸ್ಪ್ರಶ್ಯತೆಯ ಹೆಸರಿನಲ್ಲಿ ಮಾನವ ಸಮಾಜದಿಂದ ದೂರವಿಟ್ಟ ವ್ಯವಸ್ಥೆಯ ಕುರಿತು “ತನ್ನ ಕೋಟ್ಯಂತರ ಜನರನ್ನು ನಾಯಿ, ನರಿಗಿಂತ ಮತ್ತು ಅಪರಾಧಿಗಳಿಗಿಂತ ಕೀಳಾಗಿ ಕಾಣುವ ಹಾಗೂ ಅಮಾನವೀಯತೆಯಿಂದ ನೆಡಸಿಕೊಳ್ಳುವ ಧರ್ಮ ಧರ್ಮವೇ ಅಲ್ಲ” ಎಂದು ಬಾಬಸಾಹೇಬರು ನೊಂದು ನುಡಿದಿದ್ದಾರೆ. ಅಸ್ಪ್ರಶ್ಯತೆಯ ಕರಾಳತೆ ಅವರನ್ನು ಅಷ್ಟೊಂದು ಭೀತಿಗೊಳಿಸಿತ್ತು ಎನ್ನುವುದಕ್ಕೆ ಅವರ ಈ ನುಡಿಗಳೆ ಸಾಕ್ಷಿ.

ಅಮೆರಿಕ ಮತ್ತು ಇಂಗ್ಲೆಂಡ್ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆದು ಐದು ವರ್ಷಗಳ ನಂತರ ಅಂಬೇಡ್ಕರ್ ಭಾರತದ ನೆಲಕ್ಕೆ ಬಂದು ಒಬ್ಬಂಟಿಯಾಗಿ ನಿಂತಿದ್ದರು.ಇದೇ ಜಾಗದಲ್ಲಿ ಒಬ್ಬ ಸವರ್ಣೀಯನೇನಾದರು ಇದ್ದಿದ್ದರೆ ಆ ಸನ್ನಿವೇಶ ಸಡಗರ, ಸಂಭ್ರಮದಿಂದ ವಿಜೃಂಭಿಸುತ್ತಿತ್ತು.
ಆದರೆ ಅಂಬೇಡ್ಕರ್ ಪಾಲಿಗೆ ಅಂತಹ ಕ್ಷಣವನ್ನು ಕಲ್ಪಿಸಿಕೊಳ್ಳಲು ಸಾಧ್ಯ‌ವಿರಲಿಲ್ಲ. ಈ ಸಮಯದಲ್ಲಿ ಅವರೊಳಗೆ ನಾನು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದಿರುವೆನೆಂಬ ಖುಷಿಯೂ ಕೂಡ ಮಾಯವಾಗಿತ್ತು. ಅದು ಭಾರತೀಯ ಜಾತ್ಯಾಂಧ ಅನಿಷ್ಟ ಆಚರಣೆಗಳಲ್ಲಿ ಮನುಷ್ಯತ್ವ ಅನಾಥವಾದ ಸನ್ನಿವೇಶದಂತೆ ಗೋಚರಿಸುತ್ತಿತ್ತು.

ನಮ್ಮ ಸಮಾಜದಲ್ಲಿ ಇಂದಿಗೂ ಪೆಡಂಭೂತದಂತಿರುವ ಜಾತಿಜಾಢ್ಯದ ಭಯ ಬರೋಡ ನೆಲದಲ್ಲಿ ನಿಂತ ಕ್ಷಣ ಅಂಬೇಡ್ಕರ್ ಅವರನ್ನು ಯಾವ ಪರಿ ಕಾಡಿತ್ತೆಂಬುದನ್ನು ಸ್ವತಃ ಅವರೆ ದಾಖಲಿಸಿದ್ದಾರೆ. “ಪರ ದೇಶದಲ್ಲಿದ್ದ ಸಮಯದಲ್ಲಿ ನನಗಿದ್ದ ಅಸ್ಪ್ರಶ್ಯನೆಂಬ ಪ್ರಜ್ಞೆ ಪೂರ್ಣವಾಗಿ ಮರೆತು ಹೋಗಿತ್ತು. ನನ್ನ ಈ ನೆಲಕ್ಕೆ ಕಾಲೂರಿದ ತಕ್ಷಣ ಅದು ಜಾಗೃತಗೊಂಡು ಎಲ್ಲಿಗೆ ಹೋಗಲಿ?, ಯಾರು ನನಗೆ ಆಶ್ರಯ ನೀಡಿಯಾರು? ಎನ್ನುವ ಆತಂಕ ಕಾಡತೊಡಗಿತು. ಹಾಗಾಗಿ ನಾನು ಬಹಳ ಗೊಂದಲಕ್ಕೊಳಗಾಗಿ ವಿಚಲಿತನಾದೆ. ನನ್ನ ತಾಯಿ ನಾಡಿನಲ್ಲಿ ಅಸ್ಪ್ರಶ್ಯತೆಯು ಗುಲಾಮಗಿರಿಗಿಂತ ಹೀನವಾಯವಾಗಿದೆ ಹಾಗೂ ಕ್ರೌರ್ಯದಿಂದ ಕೂಡಿದೆ.” ಅವರ ಈ ನೋವಿನ ನುಡಿಗಳು ನಮ್ಮಲ್ಲಿರುವ ಜಾತಿ ವ್ಯವಸ್ಥೆಯ ರಾಕ್ಷಸ ಮನಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ.

‌ಲೇಖಕ ಎನ್.ಆರ್.ಶಿವರಾಂ ತಮ್ಮ “ಅಂಬೇಡ್ಕರ್ ಥಾಟ್ಸ್” ಕೃತಿಯಲ್ಲಿ ಅಂಬೇಡ್ಕರ್ ಅವರು ಬರೋಡದಲ್ಲಿ ಆಶ್ರಯಕ್ಕಾಗಿ ವಿಚಲಿತಗೊಂಡು ನಿಂತ ನಂತರದ ಘಟನೆಯನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಟ್ಟಿದ್ದಾರೆ.ಬರೋಡದ ಮಹಾರಾಜರ ಷರತ್ತಿನ ಮೇರೆಗೆ ಅಂಬೇಡ್ಕರ್ ಹೊರದೇಶಗಳಲ್ಲಿ ಶಿಕ್ಷಣ ಪಡೆಯಲು ಹಣಕಾಸು ಸಹಾಯ ಪಡೆದುಕೊಂಡಿದ್ದರು. ಕರಾರಿನಂತೆ ಅಮೆರಿಕ ಮತ್ತು ಲಂಡನ್ ನಲ್ಲಿ ಶಿಕ್ಷಣ ಪಡೆದ ಅವರು 1918ರಲ್ಲಿ ಸಂಸ್ಥಾನದ ಸೇವೆಗಾಗಿ ಬರೋಡಾಕ್ಕೆ ಬಂದರು. ರೈಲಿನಿಂದಿಳಿದು ಸ್ಟೇಷನ್ ಹೊರಗೆ ಬಂದಾಗ ಅವರಿಗೆ ಎಲ್ಲಿ ವಾಸ್ತವ್ಯ ಮಾಡಬೇಕೆಂಬುದರ ಬಗ್ಗೆ ಚಿಂತೆಯಾಯಿತು. ತನ್ನೆದುರಿಗೆ ಮಡಿವಂತರ ಸೋಗಿನಲ್ಲಿ ತಮ್ಮ ಕೆಳಗಿನವರನ್ನು ಮೃಗಗಳಿಗೂ ಕಡೆಯಾಗಿ ನೆಡಸಿಕೊಳ್ಳುವವರ ವಸತಿಗಳೆ ಕಂಡವು. ಆ ಕ್ಷಣದಲ್ಲಿಯೇ ಅಂಬೇಡ್ಕರ್ ಮೇಲಿನಂತೆ ನೋವಿನಿಂದ ಉದ್ಗರಿಸಿದ್ದು. ನಂತರ ಪಾರ್ಸಿ ಪ್ರವಾಸಿಗೃಹ ಒಂದರಲ್ಲಿ ಸಾಹಸಪಟ್ಟು ಉಳಿದುಕೊಂಡರು. ಅಲ್ಲಿಯೂ ಕೇವಲ ಪಾರ್ಸಿಗಳಿಗೆ ಮೀಸಲಾಗಿರುವ ಈ ಜಾಗದಲ್ಲಿ ಆಶ್ರಯ ಪಡೆದು ನಮ್ಮ ಪಾರ್ಸಿ ಪ್ರವಾಸಿ ಗೃಹವನ್ನು ಅಪವಿತ್ರಗೊಳಿಸಿರುವೆ ಎಂದು ಪಾರ್ಸಿಗಳ ಗುಂಪು ಅಂಬೇಡ್ಕರ್ ಅವರನ್ನು ಬಡಿಗೆಗಳನ್ನಿಡಿದು ಬೆದರಿಸಿ ಹೊರ ಹಾಕಿತು. ಪಾರ್ಸಿಗಳು ಅಸ್ಪೃಶ್ಯತೆ ಆಚರಿಸುವುದಿಲ್ಲವೆಂದು ನಂಬಿದ್ದ ಅಂಬೇಡ್ಕರ್ ಅವರಿಗೆ ಹಿಂದೂ ಎಂಬ ಕಾರಣಕ್ಕೆ ಪ್ರವಾಸಿ ಗೃಹದಿಂದ ಹೊರದಬ್ಬಿದ ಘಟನೆ ಆಘಾತ ನೀಡಿತ್ತು. ಎಲ್ಲಾ ಜನಾಂಗ, ಧಾರ್ಮಿಕ ಗುಂಪುಗಳಿಗೂ ಬೇರೆಯವರಿಗಿಂತ ನಾವಷ್ಟೆ ಶ್ರೇಷ್ಠ ಎನ್ನುವ ಭ್ರಮೆ ರೋಗವಾಗಿ ಮೈಮನಸ್ಸುಗಳಲ್ಲಿ ಬೆರತಿರುವುದಕ್ಕೆ ಇದೊಂದು ಉಧಹಾರಣೆ ಎನ್ನಬಹುದು. ಭಾರತೀಯ ಜಾತಿಸಮಾಜದಲ್ಲಿ ಇಂದಿಗೂ ಈ ಮನೋರೋಗ ಕಡಿಮೆಯಾಗಿಲ್ಲದಿರುವುದು ವಿಪರ್ಯಾಸವೇ ಸರಿ.

ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದರೂ ಮೇಲ್ಜಾತಿಗಳೆಂಬ ಜನರಿಂದ ತಿರಸ್ಕಾರಕ್ಕೊಳಪಟ್ಟು ಊರಿಂದ ಹೊರಗೆ ಬದುಕಬೇಕಾದ, ಕುಡಿಯುವ ನೀರನ್ನು ಮೇಲಿನಿಂದ ಬೊಗಸೆಯೊಡ್ಡಿ ಉಯ್ಯಿಸಿಕೊಳ್ಳುವ, ಹೋಟಲ್, ಮಠ, ಮಂದಿರಗಳ ಪ್ರವೇಷ ನಿಷೇಧಿಸಲ್ಪಟ್ಟ, ದಾರ್ಮಿಕ ಆಚರಣೆಗಳಿಂದ ದೂರ ಸರಿಸಲ್ಪಟ್ಟ, ಶಿಕ್ಷಣ ಮತ್ತಿತರೆ ಸವಲತ್ತುಗಳಿಂದ ವಂಚಿಸಲ್ಪಟ್ಟ, ತಮ್ಮ ನೆರಳು ಬೇರೆಯವರ ಮೇಲೆ ಬಿದ್ದರೂ ಮೈಲಿಗೆಯಾಯಿತೆಂದು ನಾಗರಿಕ ಸಮಾಜದಲ್ಲಿ ಒಂದು ದೊಡ್ಡ ಸಮುದಾಯ ಶಿಕ್ಷೆಗೆ ಗುರಿಯಾಗಬೇಕಿತ್ತು. ಇದು ಯಾವ ವಿನಂತಿಗಳಿಗೂ, ಕಾನೂನುಗಳಿಗು ಬದಲಾಗದಂತಹ ಮಾನಸಿಕ ಕ್ರೌರ್ಯ ಎಂದರೆ ತಪ್ಪಾಗಲಾರದು. ತಮ್ಮ ಮತ್ತು ತಮ್ಮ ವಸತಿ ಪ್ರದೇಶಗಳ ಕೀಳು ಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ, ಇವರು ಕಾಲಿಂದ ತೋರುತ್ತಿದ್ದ ಕೆಲಸಗಳನ್ನು ಕೈಯಿಂದ ಮಾಡಿತ್ತಿದ್ದ ಹಾಗೂ ಸದಾ ನಡು ಬಗ್ಗಿಸಿ, ತಲೆ ತಗ್ಗಿಸಿ ತಮ್ಮ ಸೇವೆ ಮಾಡುವವರನ್ನೇ ಈ ಮಾಹಾನುಬಾವರು ಅಸ್ಪ್ರಶ್ಯರೆಂಬ ಪಟ್ಟವನ್ನು ಕಟ್ಟಿ ಕೇರಿಗಟ್ಟಿದ್ದರು. ಅಂಬೇಡ್ಕರ್ ಸಹ ಇದೇ ಮಾನಸಿಕ ಹಿಂಸೆಯನ್ನು ಅನುಭವಿಸಿದ ಫಲಾನುಭವಿ. ಇವರೇ ಮುಂದೆ ಸ್ವಾಭಿಮಾನದ ಅರ್ಥವನ್ನೆ ತಿಳಿಯದ ಶೋಷಿತರ ವಿಮೋಚನೆಗೆ ಸೂರ್ಯನಾಗಿ ಉದಯಿಸಿದ್ದು ಇತಿಹಾಸ.

ಹುಟ್ಟು,ಸಾವು, ಬದುಕು, ಹಸಿವು, ನೀರಡಿಕೆ ಎಲ್ಲವೂ ಇರುವ ಮನುಷ್ಯರಲ್ಲಿ ಕೆಲವರು ಮಾತ್ರ ಹುಟ್ಟಿನಿಂದ ಹೇಗೆ ಶ್ರೇಷ್ಠರಾದರು?, ನೆಲ, ನೀರು, ಗಾಳಿ, ಬೆಂಕಿ, ಬಟ್ಟೆ ಮನುಷ್ಯರಾದ ನಮ್ಮೆಲ್ಲರಿಗೂ ಅಶ್ರಯವಾಗಿರುವಾಗ ಮೇಲು ಕೀಳೆಂಬ ತಾರತಮ್ಯದ ಸೃಷ್ಟಿ ಹೇಗಾಯಿತು?. ಇಂದಿಗೂ ಇರುವ ಶ್ರೇಷ್ಠವ್ಯಸನಿಗಳನ್ನು ಕಂಡಾಗ ಸದಾ ನನ್ನನ್ನು ಕೂಡ ಇದೇ ಪ್ರಶ್ನೆಗಳು ಕಾಡುತ್ತವೆ. ಉತ್ತರಗಳು ಕಣ್ಣಮುಂದೆ ದೃಶ್ಯಗಳಾಗಿ ನಿಂತಾಗ ಇದಕ್ಕೆ ಕಾರಣವಾದ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಯಾಗುತ್ತದೆ. ಈ ಶತಮಾನದಲ್ಲಿ ಬದುಕಿರುವ ನಮಗೇ ಹೀಗಾದರೆ ಅಂದು ಅಸ್ಪ್ರಶ್ಯ ಸಮುದಾಯ ಪಟ್ಟಪಾಡು ಅಳತೆಗೋಲಿಗೆ ಸಿಗುವಂತದ್ದಲ್ಲ. ಬಾಬಾ ಸಾಹೇಬ್ ಅವರನ್ನು ಬೇರೆ ಧರ್ಮದ ಕಡೆ ವಾಲುವಂತೆ ಮಾಡಿದ ಪ್ರಮುಖ ಕಾರಣಗಳೆ ಇವು.

ಹಿಂದೂ ದರ್ಮದಲ್ಲಿದ್ದ ಅಸಮಾನತೆ ಮತ್ತು ಅದರಿಂದ ಅನುಭವಿಸುತ್ತಿದ್ದ ಕ್ರೂರ ಅವಮಾನಗಳಿಂದ ಬಾಬ ಸಾಹೇಬ್ ಅಂಬೇಡ್ಕರ್ ಬಹುವಾಗಿ ಬೇಸತ್ತಿದ್ದರು. ಈ ಧರ್ಮದಲ್ಲಿದ್ದ ವೈಪರೀತ್ಯಗಳನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿ ಇದರಿಂದ ಬಿಡುಗಡೆಯಾಗಲು ಅಂತಿಮ ತೀರ್ಮಾನಕ್ಕೆ ಬಂದಿದ್ದರು. ಅದಕ್ಕೆ ಸಾಕ್ಷಿಯಾಗಿ ಕನ್ನಡ ಮತ್ತು ಸಂಸ್ಕ್ರತಿ ನಿರ್ದೇಶನಾಲಯ ಪ್ರಕಟಿಸಿರುವ “ಹಿಂದೂ ಧರ್ಮದ ಒಗಟುಗಳು” ಎನ್ನುವ ಅವರ ಅಪ್ರಕಟಿತ ಬರಹ ಮತ್ತು ಭಾಷಣಗಳ ಸಂಪುಟ 4 ರಲ್ಲಿ ಸವಿಸ್ತಾರವಾಗಿ ಗೋಚರವಾಗುತ್ತದೆ.

“ಕುಡಿಯಲೂ ನೀರು ಕೊಡದ, ದೇವರನ್ನೂ ನೋಡಲು ಬಿಡದ ಧರ್ಮವನ್ನು ಧರ್ಮ ಎಂದು ಕರೆಯಲಾರೆ. ಈ ಧರ್ಮ ನೀವು ವಿದ್ಯಾವಂತರಾಗುವುದನ್ನು ತಪ್ಪಿಸಿದೆ. ನಿಮ್ಮ ಭೌತಿಕ ಸುಖಗಳನ್ನೆಲ್ಲಾ ನಾಶ ಮಾಡಿದೆ. ಹಾಗಾಗಿ ಈ ಧರ್ಮದಲ್ಲಿ ನಮ್ಮಂತಹವರು ಇರಕೂಡದು. ತಮ್ಮಂತೆಯೆ ಮನುಷ್ಯರಾದವರ ಬಗ್ಗೆ ಪ್ರೇಮ, ಕನಿಕರ ತೋರಿಸದ ಧರ್ಮ ಧರ್ಮವೇ ಅಲ್ಲ. ಪ್ರಾಣಿಗಳನ್ನು ಕೊಂದರೆ ಪಾಪ ಎಂದು ತನ್ನವರಿಗೆ ಬೋಧಿಸುತ್ತ ಸಹ ಮಾನವರನ್ನು ಕ್ರೂರವಾಗಿ ಹಿಂಸಿಸುವುದನ್ನು ನಿಜವಾಗಿಯೂ ಧರ್ಮ ಎನ್ನಬೇಕೆ ?!.”ಎಂದು ತಮ್ಮ ಅನುಯಾಯಿಗಳನ್ನು ಎಚ್ಚರಿಸುತ್ತ, “ಸಮಾನತೆ, ಪ್ರೀತಿ ಮತ್ತು ಕರುಣೆಗಳು ಧರ್ಮದ ಆಧಾರ ಸ್ಥಂಬಗಳಾಗಿರಬೇಕು, ಈಗ ನಾವಿರುವ ಧರ್ಮದಲ್ಲಿ ಇಂತಹ ಮಾನವೀಯ ಅಂಶಗಳು ಕಾಣುತ್ತಿಲ್ಲ. ಯಾವ ಧರ್ಮದಲ್ಲಿ ನಾವು ತಲೆ ಎತ್ತಿ ಸ್ವಾಭಿಮಾನದಿಂದ ಬದುಕಲು ಅವಕಾಶವಿದೆಯೊ ಆ ಧರ್ಮಕ್ಕೆ ಮತಾಂತರಗೊಳ್ಳೋಣ” ಎಂದು ಕರೆ ಕೊಟ್ಟರು.

ಬಹಳ ವರ್ಷಗಳ ಕಾಲ ಬಾಬ ಸಾಹೇಬ್ ಅಂಬೇಡ್ಕರ್ ಅವರು ಬುದ್ಧ ಮತ್ತು ಅವನ ಧಮ್ಮದ ಬಗ್ಗೆ ಅಧ್ಯಯನ ಮಾಡಿ, ಎಲ್ಲಾ ರೀತಿಯ ಎಡರು ತೊಡರುಗಳನ್ನು ಯೋಚಿಸಿ, ವಿಮರ್ಶೆ ಮಾಡಿ ಕೊನೆಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಭೂತ ತತ್ವಗಳ ಬುನಾದಿಯ ಮೇಲೆ ನಿಂತಿರುವ ಬೌದ್ಧ ಧರ್ಮಕ್ಕೆ ಸೇರಬೇಕೆಂದು ತೀರ್ಮಾನಿಸಿದರು.

ಡಾ.ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೂ ಬುದ್ಧ ಮತ್ತು ಅವನು ಅನುಸರಿಸಿದ ಧರ್ಮ ಕುರಿತು ಕುತೂಹಲವಿತ್ತು. ನಾನಿರುವ ಹಿಂದೂ ಧರ್ಮಕ್ಕಿಂತ ಅದು ಭಿನ್ನವಾಗಿದೆಯೆಂಬುದನ್ನು ಅವರು ತಮ್ಮ ಅಧ್ಯಯನದಿಂದ ಅರಿತಿದ್ದರು. ಬೌದ್ಧ ಧರ್ಮ ಕುರಿತು ಆಳವಾಗಿ ತಿಳಿದುಕೊಳ್ಳುತ್ತ ಹೋದಂತೆ ಅದರಲ್ಲಿ ಅವರಿಗೆ ಹೊಸ ಹೊಳವುಗಳು ಕಾಣತೊಡಗಿದವು. ನಾನು ದೇವದೂತ, ನಾನು ದೇವರ ಪ್ರತಿನಿಧಿ, ನಾನೇ ದೇವರು ಎನ್ನುವ ಧರ್ಮ ನೇತಾರರಿಗಿಂತ. ನೈತಿಕತೆಯೇ ದೇವರು ಎಂದು ತಿಳಿಸಿದ್ದ ಅಹಿಂಸಾ ಪ್ರತಿಪಾದಕ ಬುದ್ಧನ ಬಗ್ಗೆ ಅಂಬೇಡ್ಕರ್ ಅವರಿಗೆ ಒಲವು ಮೂಡಿತ್ತು. ಸ್ವತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೂ ತಮ್ಮ ಅನುಯಾಯಿಗಳನ್ನು ಪ್ರೀತಿ ಮತ್ತು ಸಮಾನತೆಯಿಂದ ಕಾಣುವ ಬುದ್ಧನನ್ನು ಅಪ್ಪಿಕೊಳ್ಳಲು ದೃಢ ಮನಸ್ಸಿನಿಂದ ಅಂಬೇಡ್ಕರ್ ಮುಂದಡಿಯಿಟ್ಟರು.

ಸಾವಿರಾರು ವರ್ಷಗಳ ಕಾಲ ಅಸ್ಪ್ರಶ್ಯತೆಯ ಕರಾಳ ಹಿಂಸೆಯಿಂದ ನೊಂದಿದ್ದ ಲಕ್ಷಾಂತರ ಮಂದಿ ಇದರಿಂದ ವಿಮೋಚನೆಗೊಳ್ಳುವ ಕ್ಷಣಕ್ಕಾಗಿ ಕಾಯುತ್ತಿದ್ದರು. ತಮ್ಮ ಸುತ್ತಲೂ ಕವಿದಿದ್ದ ಕತ್ತಲನ್ನು ಕೊನೆಗಾಣಿಸಲು ಬೆಳಕಾಗಿ ನಿಂತ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ಸಮೂಹ ಅನುಸರಿಸಿತ್ತು. ಅದರಂತೆ ಅಕ್ಟೋಬರ್ 14, 1956ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಅಂಬೇಡ್ಕರ್ ಮತ್ತು ಅವರ ಆರು ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಈ ಘಟನೆ ಭಾರತದ ಇತಿಹಾಸದ ಒಂದು ಮೈಲಿಗಲ್ಲು ಹೌದು, ಹಾಗೆಯೇ ವಿಚಾರವಂತಿಕೆ ಇಲ್ಲದ ಭಾರತೀಯ ಜಾತಿ ವ್ಯವಸ್ಥೆಗೆ ಬಾರಿಸಿದ ಛಡಿ ಏಟು ಎಂದರೆ ಸುಳ್ಳಾಗುವುದಿಲ್ಲ.

“ವಸು ದೈವ ಕುಟುಂಬಕಂ” ಎಂದು ಸಾರುವ ಈ ನೆಲದಲ್ಲಿ ತಮ್ಮಂತೆ ಮನುಷ್ಯರೆ ಆಗಿರುವ ಬಹು ಸಂಖ್ಯಾತ ಸಮುದಾಯವನ್ನು ಮುಟ್ಟಿಸಿಕೊಳ್ಳಲಾರದವರೆಂದು ಮನಸ್ಸಿಂದ,ಮನೆಯಿಂದ, ಊರಿನಿಂದಲೇ ಹೊರಗಿಡುವುದೆಂದರೆ ಅದು ಮಾನಸಿಕ ಅಸ್ವಸ್ಥತೆಯಲ್ಲದೆ ಬೇರೆ ಏನೆಂದು ಕರೆಯಲು ಸಾಧ್ಯ?. ಇದೊಂದು ಸಾಮಾಜಿಕ ವಿಕಲತೆ ಕೂಡ. ಇಂತಹ ವಿಕೃತಿಗೆ ಗುರಿಯಾಗಿ ಅಂಬೇಡ್ಕರ್ ಅವರು ಅನುಭವಿಸಿದ ನೋವು, ದುಃಖ ಅವರನ್ನು ತಾವು ಅನುಸರಿಸಿತ್ತಿದ್ದ ಒಂದು ಧರ್ಮದಿಂದಲೆ ಹೊರಹೋಗುವಂತೆ ಮಾಡಿದ್ದು ಮನುಷ್ಯ ಜಗತ್ತಿನ ಕುರೂಪ.

“ಧರ್ಮ ಇರುವುದು ಮನುಷ್ಯನಿಗಾಗಿ, ಮನುಷ್ಯನಿರುವುದು ಧರ್ಮಕ್ಕಾಗಿ ಅಲ್ಲ.” ಎನ್ನುವುದನ್ನು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸುತ್ತಿದ್ದರು. ತಾವಿದ್ದ ಧರ್ಮದೊಳಗಿನ ಮೋಸ, ವಂಚನೆ, ಮೌಢ್ಯ, ಅಮಾನವೀಯ ಆಚರಣೆ, ಪೂರ್ವಾಗ್ರಹಗಳನ್ನು ಸ್ಪಷ್ಟವಾಗಿ ಖಂಡಿಸುತ್ತ, ಆ ಮೂಲಕ ಧರ್ಮ ಮನುಷ್ಯನ ಘನತೆಗೆ ಧಕ್ಕೆತರದೆ ಮಾನವೀಯ ಮೌಲ್ಯಗಳ ನೆಲೆಯಾಗಬೇಕೆಂದು ಬಯಸಿದ್ದರು. ಆದರೆ ಅವರ ಕೊನೆಯ ದಿನಗಳವರೆಗೂ ತಾವು ಅನುಸರಿಸುತ್ತಿದ್ದ ಹಿಂದೂ ದರ್ಮದಲ್ಲಿ ಅಂತಹ ಯಾವ ಮಹತ್ತರ ಬದಲಾವಣೆಗಳು ಆಗದಿರುವುದನ್ನು ಕಂಡು ಅಂಬೇಡ್ಕರ್ ಭ್ರಮನಿರಸನಗೊಂಡಿದ್ದರು. ಹಾಗಾಗಿಯೇ ಅವರು ತಮ್ಮ ಅಂತಿಮ ಕಾಲದಲ್ಲಿ ಬುದ್ಧನ ಕಾರುಣ್ಯ ಮತ್ತು ಪ್ರೀತಿಗೆ ಶರಣಾಗಿದ್ದು.

ಲೇಖಕರು : ಹಡವನಹಳ್ಳಿ ವೀರಣ್ಣಗೌಡ
ಲೇಖಕರು : ಹಡವನಹಳ್ಳಿ ವೀರಣ್ಣಗೌಡ

ಸ್ವತಂತ್ರ್ಯ ಭಾರತದ ಮೊದಲ ಕಾನೂನು ಮಂತ್ರಿಯಾಗಿ, ದೇಶದ ದಿಕ್ಸೂಚಿಯಾದ ಬೃಹತ್ ಸಂವಿಧಾನ ರಚಿಸಿಕೊಟ್ಟ ಭಾರತ ರತ್ನ ಡಾ.ಬೀಮರಾವ್ ರಾಮ್ ಜೀ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಎರಡು ತಿಂಗಳು ತುಂಬುವ ಮೊದಲೆ ನಿಧನರಾಗಿದ್ದು ಅತ್ಯಂತ ದುಃಖದ ಸಂಗತಿಯೇ ಸರಿ. ಏಪ್ರಿಲ್ 14, 1891ರಲ್ಲಿ ನಮ್ಮ ಈ ಭಾರತದ ನೆಲದಲ್ಲಿ ಉದಯಿಸಿದ್ದ ಜ್ಞಾನದ ಜ್ಯೋತಿ, ದಮನಿತರ ಆಶಾಕಿರಣ ಡಿಸೆಂಬರ್ 6, 1956 ರಂದು ಬುದ್ಧನೆಂಬ ಮಹಾ ಬೆಳಕಿನಲ್ಲಿ ಲೀನವಾಯಿತು.

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb