ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಆರೋಗ್ಯ ಸಂಜೀವಿನಿ, ಜಾಹೀರಾತು ನೀತಿ ಬಗ್ಗೆ ಪ್ರಭಾಕರ್ ಪ್ರಸ್ತಾಪ
ವರದಿ: ಮಂಜುನಾಥ್ ದಂಡಿನಶಿವರ
ಬೆಂಗಳೂರು: ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿರಲಿ ಮೊದಲು ತಾಳ್ಮೆ, ಸಮಾಧಾನ ಮತ್ತು ಕೇಳುವ ವ್ಯವಧಾನ ಇದ್ದರೆ ಮಾತ್ರ ಅಂತಹ ವ್ಯಕ್ತಿ ಸಾಧನೆ ಮಾಡಬಲ್ಲ. ಈ ಮೂರೂ ಗುಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನು ರೂಢಿಸಿಕೊಂಡಿದ್ದೇನೆ. ಕೋಲಾರ ಜಿಲ್ಲೆಯ ಜನ, ರಾಜ್ಯದ ಎಲ್ಲ ಪತ್ರಕರ್ತರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ನಗರದ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಾಧ್ಯಮ- ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೆರಳಿನೊಂದಿಗೆ 13 ವರ್ಷ ಕಳೆದಿದ್ದೇನೆ. ಅವರಿಂದ ಮೊಟ್ಟ ಮೊದಲು ನಾನು ಕಲಿತದ್ದು ತಾಳ್ಮೆ ಮತ್ತು ಸಮಾಧಾನ. 2013 ರಿಂದ 2018ರವರೆಗೆ ಅವರಿಂದ ಕಲಿಯಲು ಸಾಕಷ್ಟು ಸಮಯಾವಕಾಶ ಲಭಿಸಿತು. ಸಿಎಂ ಅವರಿಗೆ ಮೊದಲು ನನ್ನ ಧನ್ಯವಾದಗಳು ಸಲ್ಲುತ್ತವೆ ಎಂದರು.
ಪತ್ರಕರ್ತನಾಗಿ ನಾನು ಎಂಜಾಯ್ ಮಾಡಬಹುದಿತ್ತು. ಬದಲಾಗಿ ಪತ್ರಕರ್ತರಿಗೆ ಏನಾದರೂ ಕೊಡಬೇಕು ಎನ್ನಿಸಿದಾಗ ಬಸ್ ಪಾಸ್ ಸೌಲಭ್ಯ ಮತ್ತು ಸಿಎಂ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಲ್ಲಿ ನನಗೆ ಆತ್ಮತೃಪ್ತಿ ಇದೆ. ಇದರಲ್ಲಿರುವ ಕಠಿಣ ಷರತ್ತುಗಳನ್ನು ತೆಗೆದು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ವಾರದಲ್ಲಿಯೇ ಈ ಬಗ್ಗೆ ಗುಡ್ ನ್ಯೂಸ್ ಬರಲಿದೆ ಎಂದರು.
ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಪತ್ರಕರ್ತನಾದವನಲ್ಲ. ಒಂದೊಂದಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡು ಈ ಸ್ಥಾನಕ್ಕೆ ಬಂದವನು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಅತ್ಯಂತ ಅವಶ್ಯ. ಮೊದಲು ನಾನು ಕೋಲಾರವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ, ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಸೈಕಲ್‌ನಲ್ಲಿ ಪತ್ರಿಕೆಗಳನ್ನು ಪೇರಿಸಿಕೊಂಡು ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿದ್ದೇನೆ ಎಂದು ಪ್ರಭಾಕರ್ ಹೇಳಿದರು.
ವಿದ್ಯುನ್ಮಾನ ಸುದ್ದಿ ವಾಹಿನಿಗಳಲ್ಲಿ ಸಿಎಂ ಕುರಿತ ಹಲವು ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಸಿಎಂ ಆಗಲಿ, ನಾನಾಗಲೀ ಅವರ ಮಾಧ್ಯಮ ಸ್ವಾತಂತ್ರ್ಯವನ್ನು ಎಂದಿಗೂ ಪ್ರಶ್ನೆ ಮಾಡಿಲ್ಲ. ನನಗೆ ತಿಳಿದಷ್ಟು ಅವರಿಗೆ ಮನವರಿಕೆ ಮಾಡಿಕೊಟ್ಟಿರುತ್ತೇನೆ. ಆದರೂ ಸಿಎಂ ಕುರಿತ ಕೆಲವು ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಅಂತಹ ಸುದ್ದಿಗಳನ್ನು ಎಂದಿಗೂ ಬ್ಲಾಕ್ ಮಾಡುವ ಕೆಲಸ ಸಿಎಂ ಆಗಲಿ, ನಾನಾಗಲೀ ಮಾಡಿಲ್ಲ ಎಂದರು.
ಆಶಯ ನುಡಿಗಳನ್ನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಕಳೆದ ಮೂರು ವರ್ಷದಲ್ಲಿ ಕೆಯುಡಬ್ಲ್ಯೂಜೆ ಗೆ ಕೆ.ವಿ.ಪ್ರಭಾಕರ್ ನೆರವು ನೀಡಿದ್ದಾರೆ. ಕಚೇರಿಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಪತ್ರಕರ್ತರ ಮನಸ್ಸಿನ ಬೇಗುದಿ ಅರಿತಿರುವ ಪ್ರಭಾಕರ್ ಅವರು, ನಮ್ಮ ನಿಮ್ಮ ಹಾಗೆ ಸಾಮಾನ್ಯ ಪತ್ರಕರ್ತರಾಗಿ ಇಂದು ಇಷ್ಟು ದೊಡ್ಡ ಸ್ಥಾನದಲ್ಲಿದ್ದಾರೆ. ಬದುಕಿನ ಹಾದಿಯಲ್ಲಿ ಕೆ.ವಿ.ಪ್ರಭಾಕರ್ ಎಂದಿಗೂ ಎಡವಿ ಬಿದ್ದಿಲ್ಲ. ಇವತ್ತಿಗೂ ಅವರಲ್ಲಿ ಗರ್ವ, ದರ್ಪಗಳು ಇಲ್ಲ. ಸೌಮ್ಯ ಭಾವ ಮತ್ತು ತಾಯ್ತನದ ಪ್ರೀತಿ ಇದೆ. ಸಾಮಾನ್ಯ ಪತ್ರಕರ್ತನೊಬ್ಬ ವಿಧಾನಸೌಧದ ಕುರ್ಚಿಯಲ್ಲಿ ಕುಳಿತುಕೊಂಡಿರುವುದನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ ಎಂದರು.
ಸರ್ಕಾರ ಮತ್ತು ಪತ್ರಕರ್ತರ ನಡುವಿನ ಸೂಕ್ಷ್ಮ ಸಂಘರ್ಷಗಳನ್ನು ಬಗೆಹರಿಸಿದ್ದಾರೆ. ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ಆರೋಗ್ಯ ವಿಮೆ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಕೆಯುಡಬ್ಲ್ಯೂಜೆ ಕಚೇರಿ ಸಭಾಂಗಣ ನವೀಕರಣ ಸೇರಿ, ಇವರ ಅವಧಿಯಲ್ಲಿ ಪತ್ರಕರ್ತರಿಗೆ ಸಾಕಷ್ಟು ಅನುಕೂಲತೆಗಳು ಆಗಿವೆ. ಪತ್ರಿಕಾ ವಿತರಕರಿಗೆ ವಿಮಾ ಯೋಜನೆ, ವಿತರಕರು ಮತ್ತು ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ ಹೆಗ್ಗಳಿಕೆ ಇವರದು ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನ್ ಮಾತನಾಡಿ, ನಾನು 20 ರಾಜ್ಯಗಳಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ಫ್ರೀ ಜರ್ನಲಿಸಂ ಇದೆ. ಪತ್ರಕರ್ತರು ಇಲ್ಲಿ ಸೇಫ್. ಇಲ್ಲಿನ ಸಿಎಂ ಪತ್ರಕರ್ತರಿಗೆ ತುಂಬಾ ಅವಕಾಶಗಳನ್ನು ನೀಡಿದ್ದಾರೆ. ನಿಜಕ್ಕೂ ನನಗೆ ಖುಷಿಯ ವಿಚಾರ. ಸೈಕಲ್ ಮೇಲೆ ಪೇಪರ್ ಗಳನ್ನಿಟ್ಟು ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ಪ್ರಭಾಕರ್ ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ಸ್ಮರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಸ್ವಾಗತಿಸಿದರು. ರಾಜ್ಯ ಖಜಾಂಚಿಗಳಾದ ವಾಸುದೇವ ಹೊಳ್ಳ, ಕೆರಗೋಡು ಮತ್ತಿತರರು ಇದ್ದರು. ನಂತರ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಿಕಾ ಸಂಪಾದಕರು, ಹಿರಿಯ ವರದಿಗಾರರು, ಪತ್ರಕರ್ತರು, ಮುದ್ರಣ ಹಾಗೂ ವಿದ್ಯುನ್ಮಾನ ಪತ್ರಿಕೋದ್ಯಮದ ಪ್ರತಿಭೆಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಬಳಿಕ ಕೆ.ವಿ.ಪ್ರಭಾಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

