ಕ್ರೌರ್ಯ ಮತ್ತು ದೌರ್ಜನ್ಯವನ್ನು ಪ್ರೀತಿ ಹಂಚುವ ಮೂಲಕ ಶಮನ ಮಾಡಬೇಕು: ಬಾ.ಹ.ರಮಾಕುಮಾರಿ
ವರದಿ: ಹಡವನಹಳ್ಳಿ ವೀರಣ್ಣಗೌಡ
ತುಮಕೂರು: ಕವಿ ರಂಗಮ್ಮ ಹೊದೇಕಲ್ ಅವರ “ಹೂಮಿಂಚು” ಕೃತಿ ನಗರದ ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನ ವನದಲ್ಲಿ ಇಂದು ಲೋಕಾರ್ಪಣೆಗೊಂಡಿತು. ದಾರಿಬುತ್ತಿ ಬಳಗದ ಮಕ್ಕಳಿಂದ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಪ್ರತಿ ಕಾರ್ಯಕ್ರಮದಲ್ಲೂ ಒಂದೊಂದು ವಿನೂತನ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ದಾರಿಬುತ್ತಿಯ ಒಡನಾಡಿಗಳ ಕ್ರಿಯಾಶೀಲತೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ, ಹೂವು ಅರಳುವಾಗ ಅದಕ್ಕಾಗುವ ಸಂಕಟಗಳ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಹೂವನ್ನು ತುಳಿಯುವುದು ಹೆಣ್ಣನ್ನು ತುಳಿಯುವುದಕ್ಕೆ ಸಮ. ಹೂವಿನ ಬಗ್ಗೆ ಯಾರೂ ಕ್ರೌರ್ಯವನ್ನು ತೋರುವುದಿಲ್ಲ ಹಾಗೆಯೆ ನಾವು ಕೂಡ ಎಲ್ಲರೊಂದಿಗೂ ಹೂವಾಗಬೇಕು. ನಾವು ಪ್ರೀತಿಯನ್ನು ಹಂಚುತ್ತೇವೆ ಎನ್ನುತ್ತಿದ್ದೇವೆ ಆದರೂ ಜಗತ್ತು ಪ್ರೀತಿಯ ಕೊರತೆಯಲ್ಲಿಯೆ ಸೊರಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹೂಮನಸ್ಸಿನ ಕವಿ ರಂಗಮ್ಮ ಹೊದೇಕಲ್ ಅವರ ಹೂಮಿಂಚಿನಂತಹ ಕೃತಿಗಳು ಈ ಅಂತರವನ್ನು ತಗ್ಗಿಸಲಿ. ಪ್ರೀತಿಯನ್ನು ಹಂಬಲಿಸುವವರಿಗೆ ಪ್ರೀತಿಯನ್ನು ಕೊಡುವ ಕೆಲಸವನ್ನು ದಾರಿಬುತ್ತಿ ಬಳಗ ಮಾಡಲಿ. ಜೊತೆಗೆ ಸಮಾಜ ಮತ್ತು ಕುಟುಂಬದೊಳಗಿನ ದೌರ್ಜನ್ಯವನ್ನು ಪ್ರೀತಿ ಹಂಚುವ ಮೂಲಕ ಶಮನ ಮಾಡಬೇಕು ಎಂದ ಅವರು, ಈ ದಿನಗಳಲ್ಲಿ ಪುಸ್ತಗಳು ಬಿಡುಗಡೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೆ ತಕ್ಕಂತೆ ಓದುಗರು ಹೆಚ್ಚಾಗಬೇಕು. ಸಾಹಿತ್ಯ ಓದು ಪ್ರೀತಿ,ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇಂತಹ ಪ್ರೀತಿ ಹಂಚುವ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚುಹೆಚ್ಚು ನೆಡೆಯಲಿ ಎಂದು ತಿಳಿಸಿದರು.
ಸಾಹಿತಿ ಧನಪಾಲ್ ನಾಗರಾಜಪ್ಪ ಹೂಮಿಂಚು ಕೃತಿಯನ್ನು ಲೋಕಾರ್ಪಣೆ ಮಾಡಿ, ಕೃತಿಯನ್ನು ಪರಿಚಯಿಸುತ್ತಾ, ಮನಸ್ಸುಗಳನ್ನು ಬೆಸೆಯುವ ಪುಸ್ತಕದ ಸಾಲುಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಹೂವುಗಳು ಎಲ್ಲಾ ಸಂದರ್ಭಗಳಲ್ಲು ತಮ್ಮ ಸೌಂದರ್ಯವನ್ನು ಬೀರುತ್ತವೆಯೊ ಹಾಗೆ ಈ ಪುಸ್ತಕವಿದೆ. ನಾವೀಗ ಪ್ರಶ್ನಿಸುವದೇ ಅಪರಾಧವೇನೊ? ಎನ್ನುವ ಭಯ ನಮ್ಮನ್ನು ಕಾಡುತ್ತಿದೆ. ಪ್ರಶ್ನೆಗಳಿದ್ದಾಗಲಿ ನಾವು ಜೀವಂತವಾಗಿದ್ದೇವೆ ಎನ್ನುವುದು ಸಾಭೀತಾಗುತ್ತದೆ ಹಾಗಾಗಿ ನಮ್ಮಲ್ಲಿ ಪ್ರಶ್ನಿಸುವ ಮನಸ್ಥಿತಿ ಗಟ್ಟಿಯಾಗಬೇಕು ಎಂದ ಅವರು, .ರಂಗಮ್ಮನವರ ಹೂಮಿಂಚು ಅಂತಹ ಆತ್ಮಸ್ಥೈರ್ಯ ನೀಡುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾರಾಣಿ ಬಗ್ಗನಡು ಅವರು ಮಾತನಾಡುತ್ತಾ, ರಂಗಮ್ಮ ಹೊದೇಕಲ್ ಒಬ್ಬ ವಿಶಿಷ್ಟ ಕವಿ. ಇವರು ಕಾಡುವ ಕವಿತೆಗಳನ್ನು ಕಟ್ಟುವಲ್ಲಿ ನಿಷ್ಣಾತರು. ಅವರ ಕವಿತೆಗಳನ್ನು ಓದಿದಂತೆ ಇವು ನಮ್ಮವೆ ಎನಿಸುವಷ್ಟು ಆಪ್ತವಾಗಿವೆ. ಈ ಹೂಮಿಂಚು ಕೃತಿಯ ವಿಚಾರಗಳು ಕೂಡ ನಮ್ಮನ್ನು ಆಪ್ತವಾಗುತ್ತವೆ ಎಂಬ ಆಶಯವನ್ನು ಹಂಚಿಕೊಂಡರು.
ಕೃತಿಯ ಕರ್ತೃ ರಂಗಮ್ಮ ಹೊದೇಕಲ್ ಅವರು ಹೂವುಗಳನ್ನು ಪೋಣಿಸಿ ಹೂಮಿಂಚನ್ನು ಕಟ್ಟಿದ ದಾರಿಯನ್ನು ವಿವರಿಸಿದರು. ಇದರ ಹಿಂದಿನ ಸಹಾಯದ ಕೈಗಳನ್ನು ನೆನಸುತ್ತ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ದಾರಿಬುತ್ತಿ ಬಳಗದ ದರ್ಶನ್ ಹಾದಿಗುಂಟ ಹೂವ ಚಲ್ಲಿ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಮಾದ್ಯಮದಲ್ಲಿ ಪ್ರಸಾರವಾದದು ಹಾಗೂ ಅದು ಹೂಮಿಂಚು ಪುಸ್ತಕವಾಗಿ ರೂಪಗೊಂಡ ಬಗ್ಗೆ ತಿಳಿಸಿದರು.
ಕೆ.ವಿ.ವಿವೇಕ ನಿರೂಪಣೆ ಮಾಡಿದರು. ದಾದಪೀರ್ ಸ್ವಾಗತಿಸಿದರೆ, ದರ್ಶನ್ ಕವಿತೆಯನ್ನು ಹಾಡಿದರು ಹಾಗೂ ನವೀನ್ ವಂದಿಸಿದರು. ಲೇಖಕಿಯರಾದ ಇಂದ್ರಮ್ಮ, ಡಾ.ಹೆಚ್.ಸಿ.ಭವ್ಯ, ಶಾರದಾಂಬ ಟ್ರಸ್ಟ್ ನ ಯಶೋದ, ಅಂಗಳ ಕಮ್ಯುನಿಟಿ ಟ್ರಸ್ಟ್ ನ ವರುಣ್ ಉಪಸ್ಥಿದ್ದರು. ಹಾಗೂ ಹಲವು ಮಂದಿ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

