ಪ್ರಮುಖ ಇಲಾಖೆಗಳು ಹಿರಿಯ ನಾಯಕರ ಪಾಲು
ಬೆಂಗಳೂರು, ಜೂ. 5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಅಂತಿಮಗೊಂಡಿದ್ದು, ಪ್ರಮುಖ ಇಲಾಖೆಗಳು ಹಿರಿಯ ಸಚಿವರಿಗೆ ಹಂಚಿಕೆಯಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಗುಪ್ತಚರ, ಸಹಕಾರ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗಳ ಜವಾಬ್ದಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ ಅವರಿಗೆ ಕಂದಾಯ ಹಾಗೂ ಯುವ ಸಬಲೀಕರಣ ಇಲಾಖೆಗಳನ್ನು ವಹಿಸಲಾಗಿದೆ. ಗೃಹ ಹಾಗೂ ಐಟಿಬಿಟಿ ಖಾತೆಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದ್ದು, ಬೆಂಗಳೂರು ಅಭಿವೃದ್ಧಿ ಇಲಾಖೆಯ ಹೊಣೆಗಾರಿಕೆ ಕೃಷ್ಣ ಬೈರೇಗೌಡ ಅವರಿಗೆ ಸಿಕ್ಕಿದೆ.
ನಗರಾಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದ್ದು, ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ಯು.ಟಿ. ಖಾದರ್ ಅವರಿಗೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯ ಹೊಣೆಗಾರಿಕೆ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯನ್ನು ಎಂ.ಬಿ. ಪಾಟೀಲ್ ಅವರಿಗೆ ವಹಿಸಲಾಗಿದ್ದು, ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ಕೆ.ಜೆ. ಜಾರ್ಜ್ ಅವರಿಗೆ ನೀಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಕೆ.ಎಚ್. ಮುನಿಯಪ್ಪ ಅವರಿಗೆ ನೀಡಲಾಗಿದೆ.
ಜಲಸಂಪನ್ಮೂಲ ಇಲಾಖೆಯ ಹೊಣೆಗಾರಿಕೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡಲಾಗಿದ್ದು, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಈಶ್ವರ್ ಖಂಡ್ರೆ ಅವರಿಗೆ ವಹಿಸಲಾಗಿದೆ. ಸಾರಿಗೆ ಇಲಾಖೆಯ ಜವಾಬ್ದಾರಿಯನ್ನು ಬೈರತಿ ಸುರೇಶ್ ಅವರಿಗೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಲಾಗಿದೆ. ಈ ಮೂಲಕ ಆಡಳಿತ ಅನುಭವ, ಪ್ರಾದೇಶಿಕ ಸಮತೋಲನ ಹಾಗೂ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಯಾರಿಗೆ ಯಾವ ಖಾತೆ
ಡಿಕೆ ಶಿವಕುಮಾರ್ – ಮುಖ್ಯಮಂತ್ರಿ – ಹಣಕಾಸು, ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ
ಡಾ. ಜಿ ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ, ಯುವ ಸಬಲೀಕರಣ
ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ದಿ
ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ ಡಾ.ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ಕಲ್ಯಾಣ
ಯುಟಿ ಖಾದರ್ – ಆರೋಗ್ಯ ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಎಂಬಿ ಪಾಟೀಲ್ – ಬೃಹತ್ ಕೈಗಾರಿಕೆ ಕೆಜೆ ಜಾರ್ಜ್ – ಇಂಧನ, ಪ್ರವಾಸೋದ್ಯಮ
ಕೆಎಚ್ ಮುನಿಯಪ್ಪ – ಆಹಾರ
ರಾಮಲಿಂಗಾ ರೆಡ್ಡಿ – ಜಲಸಂಪನ್ಮೂಲ ಈಶ್ವರ್ ಖಂಡ್ರೆ – ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ
ಬೈರತಿ ಸುರೇಶ್ – ಸಾರಿಗೆ
ಡಾ.ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ
