
ವಿಜೇತರ ಪಟ್ಟಿ: ಕಾಂಗ್ರೆಸ್ (5 ಅಭ್ಯರ್ಥಿಗಳು): ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಶಿವಣ್ಣ ಬಿ.ಎಸ್. (ಮಾಲವಳ್ಳಿ), ಮತ್ತು ವಿನಯ್ ಕಾರ್ತಿಕ್ ಪ್ರಕಾಶ್.
ಬಿಜೆಪಿ (2 ಅಭ್ಯರ್ಥಿಗಳು): ರಘು ಕೌಟಿಲ್ಯ ಮತ್ತು ಲಿಂಗರಾಜ ಪಾಟೀಲ್.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಬಿಜೆಪಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಸೋಲನುಭವಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಅಡ್ಡಮತದಾನ ಆರೋಪಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಸಂಖ್ಯಾಬಲದ ಲೆಕ್ಕಾಚಾರವನ್ನು ಮೀರಿ ಕಾಂಗ್ರೆಸ್ ಹೆಚ್ಚುವರಿ ಮತಗಳನ್ನು ಪಡೆದಿರುವುದು ಗಮನ ಸೆಳೆದಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 135 ಶಾಸಕರ ಬಲವಿದ್ದರೂ, ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ಲಭಿಸಿವೆ. ಅಂದರೆ ಪಕ್ಷದ ಅಧಿಕೃತ ಸಂಖ್ಯಾಬಲಕ್ಕಿಂತ 16 ಮತಗಳು ಹೆಚ್ಚಾಗಿ ಬಂದಿವೆ. ಇದರ ಪರಿಣಾಮವಾಗಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಇನ್ನೊಂದೆಡೆ, 64 ಶಾಸಕರ ಬಲ ಹೊಂದಿರುವ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ಒಟ್ಟಾರೆ 56 ಮತಗಳು ಮಾತ್ರ ದೊರೆತಿವೆ. ಬಿಜೆಪಿ ಅಭ್ಯರ್ಥಿ ಲಿಂಗರಾಜ ಪಾಟೀಲ್ ಅವರಿಗೆ 27 ಮತಗಳು ಹಾಗೂ ರಘು ಕೆ. ಅವರಿಗೆ 29 ಮತಗಳು ಲಭಿಸಿದ್ದು, ನಿರೀಕ್ಷಿತ ಸಂಖ್ಯೆಗೆ ಹೋಲಿಸಿದರೆ ಪಕ್ಷಕ್ಕೆ ಎಂಟು ಮತಗಳ ನಷ್ಟ ಉಂಟಾಗಿದೆ.
ಜೆಡಿಎಸ್ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕರವಾಗಿತ್ತು. ಪಕ್ಷಕ್ಕೆ 18 ಶಾಸಕರ ಬಲವಿದ್ದರೂ, ಅದರ ಅಭ್ಯರ್ಥಿಗೆ ಕೇವಲ 14 ಮತಗಳು ಮಾತ್ರ ದೊರೆತಿವೆ. ಎನ್‌ಡಿಎ ಮೈತ್ರಿ ಒಪ್ಪಂದದಂತೆ ಬಿಜೆಪಿ ತನ್ನ ಮೂವರು ಶಾಸಕರ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸುವ ನಿರೀಕ್ಷೆ ಇತ್ತು. ಆ ಲೆಕ್ಕದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕನಿಷ್ಠ 21 ಮತಗಳು ದೊರಕಬೇಕಾಗಿತ್ತು. ಆದರೆ ಅಂತಿಮವಾಗಿ 14 ಮತಗಳಷ್ಟೇ ಸಿಕ್ಕಿದ್ದು, ಏಳು ಮತಗಳು ಕೈತಪ್ಪಿರುವುದು ಅಡ್ಡಮತದಾನದ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.
ಈ ಫಲಿತಾಂಶ ಕಾಂಗ್ರೆಸ್‌ಗೆ ರಾಜಕೀಯವಾಗಿ ದೊಡ್ಡ ಬಲ ತುಂಬಿದರೆ, ಬಿಜೆಪಿ ಹಾಗೂ ಜೆಡಿಎಸ್ ಪಾಳಯದಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿದೆ. ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆ ಇದೀಗ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

