ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ
ವರದಿ: ಶ್ರೀನಿವಾಸ ರೆಡ್ಡಿ ಬಳ್ಳಾರಿ
ಬೆಂಗಳೂರು: ರಾಜ್ಯಾದ್ಯಂತ ರಸಗೊಬ್ಬರ ಪೂರೈಕೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ರೈತರ ಸುಲಿಗೆಯನ್ನು ಖಂಡಿಸಿ, ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಕೃಷಿ ಭವನದ ಕೃಷಿ ಆಯುಕ್ತರ ಕಚೇರಿಗೆ ಇತ್ತೀಚೆಗೆ ಕೆ.ಆರ್.ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಭೇಟಿ ನೀಡಿ ಕೃಷಿ ಆಯುಕ್ತರಿಗೆ ಆಗ್ರಹ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಉತ್ಪಾದಕ ಕಂಪನಿಗಳು, ಡೀಲರ್ಗಳು ಹಾಗೂ ಕೃಷಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿ ರೈತರನ್ನು ಹಗಲು ದರೋಡೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ರೈತರಿಗೆ ನಿಗದಿತ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ (MRP) ರಸಗೊಬ್ಬರ ದೊರೆಯದೇ, ಶೇ.50ರಿಂದ 100ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೆ.ಆರ್.ಎಸ್ ಪಕ್ಷ ಆರೋಪಿಸಿದೆ.
ಕೇಂದ್ರ ಸರ್ಕಾರದ NBS ಮಾರ್ಗಸೂಚಿಯ ಪ್ರಕಾರ ರಸಗೊಬ್ಬರವನ್ನು ಅಂಗಡಿ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಕಂಪನಿಗಳದ್ದಾಗಿದ್ದರೂ, ಸಾಗಾಣಿಕೆ ವೆಚ್ಚವನ್ನು ಡೀಲರ್ಗಳ ಮೇಲೆ ಹೊರಿಸಿ ಅದರ ಹೊರೆ ರೈತರ ಮೇಲೆ ಬೀಳುತ್ತಿದೆ. ಸಬ್ಸಿಡಿ ರಸಗೊಬ್ಬರಗಳಾದ ಯೂರಿಯಾ ಮತ್ತು ಡಿಎಪಿ ಜೊತೆಗೆ ಬೀಜ, ಕೀಟನಾಶಕ ಸೇರಿದಂತೆ ಬೇಡದ “ಲಿಂಕ್ ಪ್ರಾಡಕ್ಟ್”ಗಳನ್ನು ಬಲವಂತವಾಗಿ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಲ ಅಧಿಕಾರಿಗಳ ಮೌಖಿಕ ಬೆಂಬಲದಿಂದಲೇ ಈ ಅಕ್ರಮಗಳು ನಿರಂತರವಾಗಿ ನಡೆಯುತ್ತಿರುವ ಆರೋಪಗಳಿವೆ.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆಯು FCO-1985 ಹಾಗೂ NBS ಮಾರ್ಗಸೂಚಿಗಳ ಅನ್ವಯ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸಿದೆ.
ಕೆ.ಆರ್.ಎಸ್ ಪಕ್ಷದ ಪ್ರಮುಖ ಆಗ್ರಹಗಳು:
• ಮುಂಗಾರು ಬೆಳೆಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು.
• ಎಲ್ಲಾ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ FCO-1985 ನಿಯಮಾನುಸಾರ ಬೆಲೆ ಹಾಗೂ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
• ರಸಗೊಬ್ಬರ ಅಕ್ರಮಗಳ ಕುರಿತು ದೂರು ನೀಡಲು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ (AD) ಮೊಬೈಲ್ ಸಂಖ್ಯೆಯನ್ನು ಅಂಗಡಿಗಳಲ್ಲಿ ಪ್ರದರ್ಶಿಸಬೇಕು.
• NBS ನಿಯಮಾವಳಿಗಳ ಪ್ರಕಾರ ರಸಗೊಬ್ಬರ ಕಂಪನಿಗಳು ಡೀಲರ್ಗಳಿಗೆ ಕಡ್ಡಾಯವಾಗಿ ಡೋರ್ ಡೆಲಿವರಿ ವ್ಯವಸ್ಥೆ ಕಲ್ಪಿಸಬೇಕು.
• ಸಬ್ಸಿಡಿ ರಸಗೊಬ್ಬರದ ಜೊತೆಗೆ ಲಿಂಕ್ ಪ್ರಾಡಕ್ಟ್ಗಳನ್ನು ನೀಡುವ ಹಾಗೂ ರೈತರಿಗೆ ಬಲವಂತವಾಗಿ ಮಾರಾಟ ಮಾಡುವ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು.
• ನಿಯಮ ಉಲ್ಲಂಘಿಸುವ ಡೀಲರ್ಗಳ ಪರವಾನಗಿ ರದ್ದುಪಡಿಸಿ, ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು.
ಈ ಸಂದರ್ಭದಲ್ಲಿ ರೈತರಿಗೆ ಕೆ.ಆರ್.ಎಸ್ ಪಕ್ಷ ಮಹತ್ವದ ಮನವಿಯನ್ನೂ ಮಾಡಿದೆ. ರಾಸಾಯನಿಕ ರಸಗೊಬ್ಬರಗಳನ್ನು ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರೆ, ರೈತರು ತಕ್ಷಣವೇ ಕಿಸಾನ್ ಸಹಾಯವಾಣಿ 18004253553 ಅಥವಾ ರೈತರ ಸಹಾಯವಾಣಿ 53553ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಅಲ್ಲದೆ, ಇಂತಹ ಅಕ್ರಮಗಳ ಬಗ್ಗೆ ಕೆ.ಆರ್.ಎಸ್ ಪಕ್ಷದ ಸಹಾಯವಾಣಿ ಸಂಖ್ಯೆ 7204974572ಕ್ಕೂ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಕೃಷಿ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಈ ಅಕ್ರಮಗಳಿಗೆ ಕಡಿವಾಣ ಹಾಕದಿದ್ದಲ್ಲಿ, ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೆ.ಆರ್.ಎಸ್ ಪಕ್ಷ ಎಚ್ಚರಿಕೆ ನೀಡಿದೆ. ಈ ಅಭಿಯಾನದಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ, ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

