
ಸಂತಾಪ ಸೂಚಿಸಿದ ಹಲವು ಗಣ್ಯರು
ಸುದ್ದಿಸಂಗಾತಿ ಧ್ವನಿ
ಬೆಂಗಳೂರು, ಜೂನ್ 11: ರಾಜ್ಯದ ಖ್ಯಾತ ವೀರಗಾಸೆ ಕಲಾವಿದ, ನಟಸಾರ್ವಭೌಮ, ನಾಟ್ಯಸಾರ್ವಭೌಮ, ಅಭಿನವ ವೀರಭದ್ರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಮಂಗಲದ ಲಿಂಗದ ವೀರರಾದ ಮಹದೇವಪ್ಪ ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯದ ಜನಪದ ಕಲಾ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮೂಲದ ಮಹದೇವಪ್ಪ ಅವರು ತಮ್ಮ ವಿಶಿಷ್ಟ ಕಲಾ ಪ್ರತಿಭೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ವೀರಗಾಸೆ ಕಲೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಿ, ಕನ್ನಡ ಜನಪದ ಸಂಸ್ಕೃತಿಯ ಹಿರಿಮೆಯನ್ನು ಪಸರಿಸಿದ್ದರು. ನೂರಾರು ಯುವ ಕಲಾವಿದರಿಗೆ ಮಾರ್ಗದರ್ಶಕರಾಗಿ, ಸ್ಪೂರ್ತಿದಾಯಕರಾಗಿ ಗುರುತಿಸಿಕೊಂಡಿದ್ದ ಅವರು, ವೀರಗಾಸೆ ಕಲೆಗೆ ಹೊಸ ಆಯಾಮ ಮತ್ತು ಎತ್ತರವನ್ನು ತಂದುಕೊಟ್ಟಿದ್ದರು.
ಅವರ ಕಲಾಸೇವೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು. ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಸಂಸ್ಕೃತಿಯ ಅಮೂಲ್ಯ ಆಸ್ತಿಯಾಗಿ ಅವರು ಹೆಸರು ಗಳಿಸಿದ್ದರು.
ಮಹದೇವಪ್ಪ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಚಲುವರಾಯಸ್ವಾಮಿ ಸೇರಿದಂತೆ ಹಲವರು ಶೋಕ ಸಂದೇಶ ಪ್ರಕಟಿಸಿದ್ದಾರೆ.
ಜನಮನ ಸೇವಾ ಟ್ರಸ್ಟ್ ಅಧ್ಯಕ್ಷ ಗೋವಿಂದರಾಜು, ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಸಂಪಾದಕ ಮಂಜುನಾಥ್ ದಂಡಿನಶಿವರ ಸೇರಿದಂತೆ ಅನೇಕ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಮಹದೇವಪ್ಪ ಅವರ ಅಗಲಿಕೆಯಿಂದ ಜನಪದ ಕಲಾ ಕ್ಷೇತ್ರವು ಅಪರೂಪದ ಸಾಧಕನನ್ನು ಕಳೆದುಕೊಂಡಿದ್ದು, ಅವರ ಕಲಾಸೇವೆ ಮತ್ತು ಸಾಧನೆಗಳು ಮುಂದಿನ ಪೀಳಿಗೆಗಳಿಗೆ ಸದಾ ಪ್ರೇರಣೆಯಾಗಲಿವೆ.

