ಬೆಂಗಳೂರು, ಜೂ. 7: ದೇಶದಾದ್ಯಂತ ಪ್ರಕಟವಾಗುತ್ತಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ನೀಡಲಾಗುತ್ತಿದ್ದ ಅಂಚೆ ರಿಯಾಯಿತಿಯನ್ನು ಮರುಸ್ಥಾಪಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಅಸ್ತಿತ್ವಕ್ಕೆ ಸವಾಲಾಗಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಂಚೆ ಇಲಾಖೆಯ 2024ರ ಡಿಸೆಂಬರ್ 16ರ PO ORDER-PO/01/2024 ಆದೇಶದ ಪ್ರಕಾರ, ಅಂಚೆ ರಿಯಾಯಿತಿಗೆ ಅರ್ಹತೆ ಪಡೆಯಲು ಪತ್ರಿಕೆಗಳು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ಪ್ರಕಟವಾಗಬೇಕೆಂಬ ಹೊಸ ನಿಯಮ ಜಾರಿಗೆ ಬಂದಿದೆ. ಇದರಿಂದ ಪಾಕ್ಷಿಕ, ಮಾಸಿಕ ಸೇರಿದಂತೆ ಅನೇಕ ನೋಂದಾಯಿತ ನಿಯತಕಾಲಿಕೆಗಳು ಅಂಚೆ ರಿಯಾಯಿತಿ ಸೌಲಭ್ಯದಿಂದ ಹೊರಗುಳಿದಿವೆ ಎಂದು ಅವರು ತಿಳಿಸಿದ್ದಾರೆ.
ಈ ನಿರ್ಧಾರವು ಸಣ್ಣ ಮತ್ತು ಮಧ್ಯಮ ಪ್ರಕಾಶಕರ ಮೇಲೆ ಗಂಭೀರ ಆರ್ಥಿಕ ಪರಿಣಾಮ ಬೀರಿದ್ದು, ಹಿಂದೆ ಸುಮಾರು 50 ಪೈಸೆ ವೆಚ್ಚದಲ್ಲಿ ವಿತರಣೆ ಮಾಡಲಾಗುತ್ತಿದ್ದ ಪ್ರತಿಗಳಿಗೆ ಈಗ ₹4 ರಿಂದ ₹5ರವರೆಗೆ ಅಂಚೆ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿತರಣಾ ವೆಚ್ಚವು ಹತ್ತು ಪಟ್ಟು ಹೆಚ್ಚಳಗೊಂಡಿದೆ ಎಂದು ಪ್ರಕಾಶಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಸಮಸ್ಯೆಗಳು, ಸಾಮಾಜಿಕ ಜಾಗೃತಿ, ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳ ಪ್ರವೇಶ ಕಡಿಮೆ ಇರುವ ಪ್ರದೇಶಗಳಲ್ಲಿ ಇವು ಮಾಹಿತಿ ಹರಿವಿನ ಪ್ರಮುಖ ಮಾಧ್ಯಮಗಳಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ನಿಯತಕಾಲಿಕೆಗಳು ಸಮಾಜದಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಆದ್ದರಿಂದ ಪ್ರಕಟಣೆಯ ಅವಧಿಯನ್ನು ಆಧಾರವಾಗಿಟ್ಟುಕೊಂಡು ರಿಯಾಯಿತಿ ಸೌಲಭ್ಯವನ್ನು ನಿರಾಕರಿಸುವ ಬದಲು, ಎಲ್ಲಾ ನೋಂದಾಯಿತ ನಿಯತಕಾಲಿಕೆಗಳಿಗೆ ಅಂಚೆ ರಿಯಾಯಿತಿಯನ್ನು ಮರುಜಾರಿಗೊಳಿಸಬೇಕೆಂದು ಕೆಯುಡಬ್ಲ್ಯೂಜೆ ಆಗ್ರಹಿಸಿದೆ.
ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಈ ಆದೇಶವನ್ನು ಮರುಪರಿಶೀಲಿಸಿ, ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡುವ ಕ್ರಮ ಕೈಗೊಳ್ಳಬೇಕೆಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಒತ್ತಾಯಿಸಿದ್ದಾರೆ.

