ಬೆಂಗಳೂರು, ಜೂ. 4: ಕರ್ನಾಟಕದ ಹೆಮ್ಮೆಯ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತೋತ್ಸವವನ್ನು ಗುರುವಾರ ನಗರದ ಕೃಷ್ಣನಂದನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಬಡಾವಣೆ, ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಲ್ಲಿ ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೆ. ಗೋಪಾಲಯ್ಯ ಅವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.
ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಮಾರಪ್ಪನಪಾಳ್ಯ ವಾರ್ಡ್ನ ಮುಖಂಡ ಮಹದೇವ್, ರಾಜೇಂದ್ರಕುಮಾರ್, ವಾರ್ಡ್ ಮುಖ್ಯಸ್ಥರಾದ ಪುಟ್ಟಸ್ವಾಮಿ, ಸಂಘದ ಉಪಾಧ್ಯಕ್ಷರಾದ ಯಲ್ಲರಾಜು, ವಿನಯ್ ರಾಜೇ ಅರಸ್ ರಾಜರ್ಷಿ ಪ್ರಕಾಶನದ ಪ್ರಕಾಶಕ ಮತ್ತು ಪತ್ರಕರ್ತ ಎಸ್.ಆರ್.ಗೋವಿಂದರಾಜು, ಪತ್ರಿಕಾ ಸಂಪಾದಕ ಮಂಜುನಾಥ್ ದಂಡಿನಶಿವರ, ಜನಮನ ಗೋವಿಂದರಾಜು, ಸಿದ್ದೇಶ್ ಮುಂತಾದವರು ಉಪಸ್ಥಿತರಿದ್ದರು.
ರಾಜರ್ಷಿ ಪ್ರಕಾಶನ, ಜನಮನ ಸೇವಾ ಟ್ರಸ್ಟ್, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶ ಆಡಳಿತ, ಶಿಕ್ಷಣ ಪ್ರಗತಿ, ಕೃಷಿ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಜಯಂತೋತ್ಸವ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
ಇದೇ ಸಂದರ್ಭದಲ್ಲಿ ಜಯರಾಮ್ ಮತ್ತು ಸಂಗಡಿಗರ ನೇತೃತ್ವದ ನಂದಿನಿ ಬಡಾವಣೆಯ ಸರ್ಕ್ಯುಲರ್ ಪಾರ್ಕ್ ವನಗಾನ ತಂಡದಿಂದ ವಿಶೇಷ ಗೀತಗಾಯನ ಕಾರ್ಯಕ್ರಮ ನಡೆಯಿತು.



