ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಮತ್ತು ಅಕ್ಕಪಕ್ಕದ 33 ಹಳ್ಳಿಗಳ ಪ್ರಸಿದ್ದ ದೇವತೆ ಶ್ರೀ ಹೊನ್ನಾದೇವಿಯ ಜಾತ್ರಾ ಮಹೋತ್ಸವವು ಕಳೆದ ಮಂಗಳವಾರದಿಂದ ಶನಿವಾರದವರೆಗೆ ಅದ್ದೂರಿಯಾಗಿ ನಡೆಯಿತು.
ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಮಡೆ ಉತ್ಸವ ಜರುಗಿತು. ನೂರಾರು ಭಕ್ತರು ಮಡೆಗಡಿಗೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ದೇವಿಗೆ ಮಡೆಅನ್ನ ಸಮರ್ಪಿಸಿದರು.
ಬುಧವಾರ ರಾತ್ರಿ ಅಪರೂಪವಾದ ಸೋಮನಕುಣಿತ ನಡೆಯಿತು. ಇಲ್ಲಿನ ಸೋಮನಕುಣಿತ ಇತರ ಕಡೆಗಳ ಸೋಮಗಳ ಕುಣಿತಕ್ಕಿಂತ ವಿಭಿನ್ನವಾಗಿದ್ದು, ಇಲ್ಲಿ ರಾತ್ರಿ ವೇಳೆ ಮಾತ್ರ ನಡೆಯುತ್ತದೆ. ಅದೂ ಈ ಕುಣಿತ ವರ್ಷಕ್ಕೆರೆಡೇ ದಿನ ಆಚರಣೆಗೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಗುರುವಾರ ಬಾಯಿಬೀಗ, ಆರತಿ ಮುಂತಾದ ಸೇವೆಗಳು ನಡೆದವು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಬಾಯಿಬೀಗ ಹಾಕಿಸಿಕೊಂಡು ದೇವಿಗೆ ಆರತಿ ಸೇವೆ ಸಮರ್ಪಿಸಿದರು.
ಶುಕ್ರವಾರ ಬೆಳಿಗ್ಗೆ ಶ್ರೀಹೊನ್ನಾದೇವಿಯ ಮಹಾರಥೋತ್ಸವ ಬಹಳ ವೈಭವವಾಗಿ ಜರುಗಿತು. ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸಿ, ದೇವಿ ಕೃಪೆಗೆ ಪಾತ್ರರಾದರು.
ಶನಿವಾರ ಹಗಲುಪರಿಷೆ, ಸೋಮನಕುಣಿತ ಮುಂತಾದ ಪೂಜಾ ವಿಧಿವಿಧಾನಗಳು ಏರ್ಪಟ್ಟಿದ್ದವು. ಕಂಬ ವಿಸರ್ಜನೆ ಮೂಲಕ ಜಾತ್ರೆಗೆ ಅಂತಿಮ ತೆರೆ ಎಳೆಯಲಾಯಿತು.
ಈ ಊರು ಮತ್ತು ಸುತ್ತಮುತ್ತಲ 33 ಹಳ್ಳಿಗಳ ಜನರು ಕಳೆದ ಒಂದು ತಿಂಗಳಿನಿಂದ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ದೇವಿಯ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಿದ್ದು ಇಲ್ಲಿನ ವಿಶೇಷ ಸಂಗತಿಯಾಗಿದೆ.

